ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ 77 ಇವಿಎಂ ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದು, ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರ ಅಡಿಯಲ್ಲಿ ಬರುವ ಫಾಲ್ಟಾ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಇವಿಎಂ ಯಂತ್ರಗಳ ಮೇಲಿನ ಕೆಲವು ಅಭ್ಯರ್ಥಿಗಳ ಬಟನ್ ಅಥವಾ ಪಕ್ಷದ ಗುರುತಿನ ಮೇಲೆ ಅಥವಾ ಬಟನ್ ಮೇಲೆ ಕಪ್ಪು ಟೇಪ್, ಸೆಲೋಫೇನ್ ಟೇಪ್ ಅಥವಾ ಸುಗಂಧ ದ್ರವ್ಯವನ್ನು ಹಚ್ಚುವ ಮೂಲಕ ಮತ ಚಲಾವಣೆಗೆ ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವೆಬ್‌ಕಾಸ್ಟಿಂಗ್ ವಿಡಿಯೋಗಳನ್ನು ಮತ್ತು ಪ್ರಿಸೈಡಿಂಗ್ ಅಧಿಕಾರಿಗಳ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಒಂದು ವೇಳೆ ಇವಿಎಂ ಮೇಲೆ ಟೇಪ್ ಅಂಟಿಸಿರುವುದು ಸಾಬೀತಾದಲ್ಲಿ, ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಿದೆ.

ಫಾಲ್ಟಾ ಒಂದರಲ್ಲೇ ಅತಿ ಹೆಚ್ಚು ಅಂದರೆ 32 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿದ್ದು, ಇವುಗಳಲ್ಲಿ ಸುಮಾರು 20 ಮತಗಟ್ಟೆಗಳಲ್ಲಿ ಮರುಮತದಾನ ಖಚಿತವಾಗಿ ನಡೆಯುವ ಸಾಧ್ಯತೆಯಿದೆ.ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಮನೋಜ್ ಕುಮಾರ್ ಅಗರ್ವಾಲ್ ಅವರು ಈ ದೂರುಗಳನ್ನು ಪರಿಶೀಲಿಸುತ್ತಿದ್ದು, ದೂರುಗಳು ಸಾಬೀತಾದಲ್ಲಿ ಆಯಾ ಮತಗಟ್ಟೆಗಳಲ್ಲಿ ಮೇ 2 ರೊಳಗೆ ಮರುಮತದಾನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!