ಉದಯವಾಹಿನಿ , ಚಾಮರಾಜನಗರ: ನಿಯಂತ್ರಣ ತಪ್ಪಿದ ಕೆಎಸ್ಆರ್​ಟಿಸಿ ಬಸ್ ಪಲ್ಟಿಯಾಗಿದ್ದು, 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ತಾಳುಬೆಟ್ಟದ ತಿರುವಿನಲ್ಲಿ ಇಂದು ನಡೆಯಿತು.ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದತ್ತ ತೆರಳುತ್ತಿದ್ದ ಕೆಎ-09 ಎಫ್-5415 ಬಸ್ ತಾಳುಬೆಟ್ಟದ ತಿರುವಿನಲ್ಲಿ ತಡೆಗೋಡೆಯ ಬಳಿ ಪಲ್ಟಿಯಾಗಿದೆ. ಬಸ್​ನಲ್ಲಿದ್ದ 50 ಮಂದಿ ಪ್ರಯಾಣಿಕರಲ್ಲಿ 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಬಹುತೇಕರಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿವೆ ಎಂದು ತಿಳಿದು ಬಂದಿದೆ.

ಬಸ್​ ನಿರ್ವಾಹಕಿ ಪದ್ಮಾವತಿ ಅವರಿಗೆ ತಲೆಗೆ ತೀವ್ರ ಗಾಯವಾಗಿದೆ. ಪ್ರಯಾಣಿಕರಾದ ಮೈಸೂರಿನ ದಾಕ್ಷಾಯಿಣಿ, ಸಿದ್ದಯ್ಯನಪುರದ ಸುಂದ್ರಮ್ಮ ಬಸವರಾಜು ಎಂಬವರಿಗೂ ತೀವ್ರ ಪೆಟ್ಟಾಗಿದೆ. ಗಾಯಗೊಂಡ ಎಲ್ಲ ಪ್ರಯಾಣಿಕರಿಗೂ ಕೌದಳ್ಳಿ, ಹನೂರು ಮತ್ತು‌ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹುಣ್ಣಿಮೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯೂ ಅಧಿಕವಾಗಿದ್ದ ಕಾರಣ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.’ಚಾಲಕನ ಅತಿವೇಗ ಮತ್ತು‌ ಅಜಾಗರೂಕತೆಯಿಂದ ಅವಘಡ’: ಕೊಳ್ಳೇಗಾಲ ಆಸ್ಪತ್ರೆಯಲ್ಲಿ 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಿರುವಿನಲ್ಲಿ ಉರುಳುತ್ತಿದ್ದಂತೆ ಚಾಲಕ ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಆರಂಭದಿಂದಲೂ ತುಂಬಾ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಈ ಬಗ್ಗೆ ಎಚ್ಚರಿಸಿದರೂ ಕಿವಿಗೊಡಲಿಲ್ಲ. ಅತಿವೇಗ ಮತ್ತು‌ ಅಜಾಗರೂಕತೆಯಿಂದ ಅವಘಡ ಉಂಟಾಗಿದೆ ಎಂದು ಗಾಯಾಳುಗಳು ತಿಳಿಸಿದರು. ಎರಡು ದಿನಗಳ ಹಿಂದೆ ಉಡುಪಿಯಲ್ಲಿ ಭೀಕರ ಅಪಘಾತ: ಕಾಲೇಜು ಪ್ರವಾಸ ಹೊರಟಿದ್ದ ಬಸ್​ ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ತ್ರಾಸಿಯ ಮರವಂತೆ ಬೀಚ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿತ್ತು.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ಹಂತದ ಬಿ.ಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ 24 ವಿದ್ಯಾರ್ಥಿಗಳು, 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು. ಇವರೆಲ್ಲರೂ ಮುರ್ಡೇಶ್ವರಕ್ಕೆ ತೆರಳಿದ್ದು, ಅಲ್ಲಿಂದ ಬೆಳಗ್ಗೆ ಉಡುಪಿ ಕಡೆ ಬಸ್‌ನಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿ ನಿಲ್ಲಿಸಿದ ಗ್ಯಾಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಅಲ್ಲೇ ಮುಂದೆ ನಿಲ್ಲಿಸಿದ ಗೂಡ್ಸ್ ಲಾರಿಗೂ ಡಿಕ್ಕಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!