ಉದಯವಾಹಿನಿ , ಬೆಂಗಳೂರು: ಪತಿಯಿಂದ ದೂರವಾಗಿದ್ದ ಮಹಿಳೆಗೆ ತಾನು ಉಪನ್ಯಾಸಕ ಎಂದು ಪರಿಚಯಿಸಿಕೊಂಡು ಕಾಲಕ್ರಮೇಣ ದೈಹಿಕ ಸಂಬಂಧ ಬೆಳೆಸಿ, ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್‌ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
43 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಹನಿಯೂರಿನ ಚಂದ್ರೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಈತ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರು: ”ನಾನು ವೃತ್ತಿಯಲ್ಲಿ ಮೇಕಪ್ ಕಲಾವಿದೆ. ನನಗೆ ಓರ್ವ ಮಗಳಿದ್ದಾಳೆ. ವೈಯಕ್ತಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದೇನೆ. 2021ರಲ್ಲಿ ಪರಿಚಯವಾಗಿದ್ದ ಆರೋಪಿ, ತಾನು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮೇಕಪ್ ಕೆಲಸವಿದ್ದರೆ ನಿಮ್ಮನ್ನು ಸಂಪರ್ಕಿಸುವುದಾಗಿ ನನ್ನ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕಾಲಕ್ರಮೇಣ ನನ್ನ ಮನೆಗೆ ಬಂದು ಹೋಗುತ್ತಿದ್ದ‌‌. ನಾನು ಉಪನ್ಯಾಸಕನಾಗಿದ್ದು ಕೈ ತುಂಬಾ ಸಂಬಳ ಬರುತ್ತಿದೆ. ಅಲ್ಲದೆ‌ ನಾನೂ ಸಹ ಮದುವೆಯಾಗಿ ವಿಚ್ಚೇದನ ಪಡೆದಿದ್ದೇನೆ ಎಂದು ನಂಬಿಸಿ ನನ್ನನ್ನು ವಿವಾಹವಾಗುವಂತೆ ನಿವೇದಿಸಿಕೊಂಡಿದ್ದ. “ಆಗಾಗ ನನ್ನ ಮನೆಗೆ ಬಂದು ಹೋಗುತ್ತಿದ್ದ. ನನ್ನೊಂದಿಗೆ ದೈಹಿಕ ಸಂಪರ್ಕವನ್ನೂ ಹೊಂದಿದ್ದ. ಬಳಿಕ ನಿನ್ನೊಂದಿಗೆ ಕಳೆದಿರುವ ಖಾಸಗಿ ಕ್ಷಣಗಳನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಹೇಳಿದಂತೆ ಕೇಳದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಲು ಶುರು ಮಾಡಿದ್ದಾನೆ.”

“ಎಸ್ಪಿ ಹುದ್ದೆಯ‌ ನಕಲಿ ಐಡಿ ಸೃಷ್ಟಿಸಿಕೊಂಡು ಟೋಲ್​ಗಳಲ್ಲಿ ಪೊಲೀಸ್ ಎಂದು ಹೇಳುತ್ತಿದ್ದ. ವಕೀಲ, ಮಾಧ್ಯಮ ಪ್ರತಿನಿಧಿ ಎಂದು ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡಿದ್ದ. ಇತ್ತೀಚೆಗೆ ರಾಮನಗರ ಮಕ್ಕಳ‌ ರಕ್ಷಣಾ ಆಯೋಗದ ಜಡ್ಜ್ ಎಂದೂ ಬಿಂಬಿಸಿಕೊಂಡಿದ್ದ. 2021ರಿಂದ ಈವರೆಗೂ ಪಡೆದಿದ್ದ 5 ಲಕ್ಷ ವಾಪಸ್ ಕೊಟ್ಟಿಲ್ಲ” ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!