ಉದಯವಾಹಿನಿ , ತಿರುವನಂತಪುರಂ: ಎರ್ನಾಕುಳಂ ಜಿಲ್ಲೆಯ ಅಂಕಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು (ಮೇ 1) ಮದವೇರಿದ ಆನೆಯೊಂದು ಅಟ್ಟಹಾಸಗೈದಿದೆ. ಆನೆಯ ತುಳಿತಕ್ಕೆ ಸಿಲುಕಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾವುತನ ಸ್ಥಿತಿ ಗಂಭೀರವಾಗಿದೆ.ಅಕ್ಕಪಕ್ಕದ ದೇವಸ್ಥಾನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆಯನ್ನು ಕರೆತರಲಾಗಿತ್ತು. ಇಂದು ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಆನೆಯನ್ನು ಸ್ನಾನ ಮಾಡಿಸಲು ಕಿದಂಗೂರ್ ದೇವಸ್ಥಾನಕ್ಕೆ ಕರೆತಂದಾಗ, ಅದು ಇದ್ದಕ್ಕಿದ್ದಂತೆ ಮದವೇರಿ ಗಲಾಟೆ ಮಾಡಲು ಆರಂಭಿಸಿದೆ.
ಆನೆಯನ್ನು ಲಾರಿಯಲ್ಲಿ ಕರೆತಂದಿದ್ದ ಕೊಲ್ಲಂ ನಿವಾಸಿ ವಿಷ್ಣು ಎಂಬುವವರು ಆನೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಆನೆ ಅವರ ಮೇಲೆರಗಿ ತುಳಿದು ಸಾಯಿಸಿದೆ.ಆನೆಯ ಎರಡನೇ ಮಾವುತ ಪ್ರದೀಪ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಅಂಕಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಮಾರು ಮೂರು ಗಂಟೆಗಳ ಕಾಲ ಅಟ್ಟಹಾಸ ಮೆರೆದ ಆನೆಯು ದೇವಸ್ಥಾನದ ಆವರಣದಲ್ಲಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪುಡಿಪುಡಿ ಮಾಡಿದೆ. ಆನೆಯ ಆಕ್ರೋಶ ಕಂಡು ಭಕ್ತರು ಹಾಗೂ ಸ್ಥಳೀಯರು ಪ್ರಾಣಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!