ಉದಯವಾಹಿನಿ ಜಬಲ್ಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ನರ್ಮದಾ ನದಿಯ ಬರಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಪ್ರವಾಸಿ ದೋಣಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮುಂಜಾನೆ ನದಿಯಿಂದ ಇನ್ನೂ ಐದು ಶವಗಳನ್ನು ಹೊರತೆಗೆಯಲಾಗಿದೆ. ಅಲ್ಲದೆ, ಹಲವಾರು ಪ್ರಯಾಣಿಕರು ಇನ್ನೂ ಕಾಣೆಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ಬರಗಿ ಅಣೆಕಟ್ಟಿನಲ್ಲಿ ಗುರುವಾರ ಹಠಾತ್ ಬಿರುಗಾಳಿಯಿಂದಾಗಿ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ದೋಣಿ ಮಗುಚಿ ಬಿದ್ದಿದೆ. ಘಟನೆಯ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, 22 ಜನರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ. ಆದರೆ ಇನ್ನೂ ಹಲವರು ಕಾಣೆಯಾಗಿದ್ದಾರೆ ಎಂದು ಬಾರ್ಗಿ ಪೊಲೀಸ್ ವರಿಷ್ಠಾಧಿಕಾರಿ ಅಂಜುಲ್ ಮಿಶ್ರಾ ತಿಳಿಸಿದ್ದಾರೆ. ಪೊಲೀಸ್, ನಾಗರಿಕ ಆಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಂಟಿ ತಂಡವು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅವರಿಗೆ ವೃತ್ತಿಪರ ಡೈವರ್‌ಗಳು, ಮೋಟಾರ್‌ಬೋಟ್‌ಗಳು ಮತ್ತು ಸ್ಪೀಡ್‌ಬೋಟ್‌ಗಳು ನೆರವು ನೀಡುತ್ತಿವೆ.
ಘಟನಾ ಸ್ಥಳದಲ್ಲಿದ್ದ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ಮಾತನಾಡಿ, “ಇನ್ನೂ ಐದು ಶವಗಳನ್ನು ಹೊರತೆಗೆಯಲಾಗಿದೆ. ಕೆಲವರು ಲೈಫ್ ಜಾಕೆಟ್ ಧರಿಸಿದ್ದರು. ಅವರು ಕೆಳಗಿನ ಎಸಿ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕ್ರೂಸ್ ಮಗುಚಿ ಬಿದ್ದಾಗ ಅವರಿಗೆ ಹೊರಬರಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.
ಸಿಎಂ ಸಂತಾಪ: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.”ಜಬಲ್ಪುರದಲ್ಲಿ ತೀವ್ರ ಬಿರುಗಾಳಿಯಿಂದ ಬರಗಿ ಅಣೆಕಟ್ಟೆಯಲ್ಲಿ ಸಂಭವಿಸಿದ ದುರಂತ ಸಂಬಂಧ ಸ್ಥಳೀಯ ಆಡಳಿತ ಮತ್ತು ರಕ್ಷಣಾ ಪಡೆಗಳ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಿದೆ. ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್, ಪ್ರವಾಸೋದ್ಯಮ ಸಚಿವ ಧ್ರುವೇಂದ್ರ ಸಿಂಗ್ ಲೋಧಿ, ವಿಭಾಗೀಯ ಉಸ್ತುವಾರಿ ಎಸಿಎಸ್, ಎಡಿಜಿ ಮತ್ತು ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ತಲುಪಲು ನಿರ್ದೇಶಿಸಲಾಗಿದೆ” ಎಂದು X ನಲ್ಲಿ ಸಿಎಂ ಬರೆದುಕೊಂಡಿದ್ದಾರೆ.
