ಉದಯವಾಹಿನಿ ಮುಂಬೈನಲ್ಲಿ ಸಕ್ರಿಯವಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಭೇದಿಸಿದ್ದು, 1,745 ಕೋಟಿ ರೂ. ಮೌಲ್ಯದ 349 ಕಿಲೋಗ್ರಾಂ ಹೈಗ್ರೇಡ್ ಕೊಕೇನ್ ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬೃಹತ್ ಕಾರ್ಯಾಚರಣೆಯ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತ್ ಶಾ, “ಮಾದಕ ವಸ್ತುಗಳ ಜಾಲವನ್ನು ಹತ್ತಿಕ್ಕಲು ದೃಢನಿಶ್ಚಯ ಹೊಂದಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಮುಂಬೈನಲ್ಲಿ 1,745 ಕೋಟಿ ರೂ. ಮೌಲ್ಯದ 349 ಕೆ.ಜಿ ಉನ್ನತ ದರ್ಜೆಯ ಕೊಕೇನ್ ವಶಪಡಿಸಿಕೊಂಡಿದೆ. ಬೃಹತ್ ಜಾಲವನ್ನು ಭೇದಿಸಲು ಸಂಸ್ಥೆಯು ಕೆಳಮಟ್ಟದಿಂದ ಮೇಲಿನವರೆಗೆ ಕೈಗೊಂಡ ಕಾರ್ಯಾಚರಣೆ ಒಂದು ಅದ್ಭುತ ಉದಾಹರಣೆ” ಎಂದು ತಿಳಿಸಿದ್ದಾರೆ.

ಪ್ರಮುಖ ಮಾದಕ ವಸ್ತುಗಳ ಜಾಲವನ್ನು ಭೇದಿಸಿದ್ದಕ್ಕಾಗಿ ಮಾದಕ ವಸ್ತುಗಳ ನಿಯಂತ್ರಣ ಬ್ಯೂರೋ ತಂಡವನ್ನು ಗೃಹ ಸಚಿವರು ಅಭಿನಂದಿಸಿದ್ದಾರೆ. “ಈ ಅಭೂತಪೂರ್ವ ಯಶಸ್ಸಿಗೆ ಎನ್‌ಸಿಬಿ ತಂಡಕ್ಕೆ ಅಭಿನಂದನೆಗಳು” ಎಂದು ಪ್ರಶಂಸಿಸಿದ್ದಾರೆ.

‘ಆಪರೇಷನ್ ಗ್ಲೋಬಲ್-ಹಂಟ್’ ಅಡಿಯಲ್ಲಿ ಟರ್ಕಿಯಿಂದ ಭಾರತಕ್ಕೆ ಬಂದ ಮಾದಕವಸ್ತು ಕಳ್ಳಸಾಗಣೆದಾರ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಸಹಾಯಕ ಸಲೀಂ ಡೋಲಾ ಎಂಬಾತನನ್ನು ವಶಪಡಿಸಿಕೊಂಡ ಬೆನ್ನಲ್ಲೇ ಎನ್‌ಸಿಬಿ ಈ ಕಾರ್ಯಾಚರಣೆ ನಡೆಸಿದೆ. ಸಲೀಂ ಡೋಲಾನನ್ನು ಎನ್‌ಸಿಬಿ ಗುರುವಾರ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.

ಇತ್ತೀಚೆಗೆ ನಾಗ್ಪರದಲ್ಲಿ ಡ್ರಗ್ಸ್ ವಶ: ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಇದೇ ಮೊದಲ ಬಾರಿಗೆ ಲೈಸೆರ್ಜಿಕ್ ಆಸಿಡ್ ಡೈಥೈಲಾಮೈಡ್ (LSD) ಎಂಬ ಅಪಾಯಕಾರಿ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 1.7 ಲಕ್ಷ ರೂಪಾಯಿ ಮೌಲ್ಯದ ಪಾರ್ಟಿ ಡ್ರಗ್ಸ್ ಹೊಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಾಗ್ಪುರ ಎಂಐಡಿಸಿ ಪೊಲೀಸ್ ಠಾಣಾ ವ್ಯಾಪ್ತಿಯ ಜೈತಲಾ ಪ್ರದೇಶದ ಬ್ಯಾಡ್ಜ್ ಲೇಔಟ್‌ನಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಮಾದಕ ದ್ರವ್ಯ ನಿರೋಧಕ ದಳ (NDPS) ಮತ್ತು ಭರೋಸಾ ಸೆಲ್ ಜಂಟಿಯಾಗಿ ಜೈತಲಾ ಪ್ರದೇಶದಲ್ಲಿ ‘ಕೂಂಬಿಂಗ್’ ಕಾರ್ಯಾಚರಣೆ ನಡೆಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಬ್ಯಾಡ್ಜ್ ಲೇಔಟ್‌ನಲ್ಲಿ ಬಲೆ ಬೀಸಲಾಗಿತ್ತು.ಅಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ತಪಾಸಣೆಗೊಳಪಡಿಸಿದಾಗ, ಅವರ ಬಳಿ 17 ಎಲ್‌ಎಸ್‌ಡಿ ಡಾಟ್‌ಗಳು (ಸ್ಟಿಕರ್ ರೂಪದಲ್ಲಿರುವ ಡ್ರಗ್ಸ್) ಪತ್ತೆಯಾಗಿತ್ತು. ಇವರ ಬಂಧನದಿಂದ ನಾಗ್ಪುರದಲ್ಲಿ ಸಕ್ರಿಯವಾಗಿದ್ದ ಪಾರ್ಟಿ ಡ್ರಗ್ಸ್ ಜಾಲವೊಂದು ಬೆಳಕಿಗೆ ಬಂದಿತ್ತು.

 

Leave a Reply

Your email address will not be published. Required fields are marked *

error: Content is protected !!