ಉದಯವಾಹಿನಿ , ಕರ್ನೂಲ್, : ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ.
ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಮತ್ತು ಕುಟುಂಬವು ಹೊಂದಿದ್ದ ಸಾಲದ ಹೊರೆಯು ಚಂದು ಅವರ ಮೇಲೆ ತೀವ್ರ ಭಾವನಾತ್ಮಕ ಒತ್ತಡ ಹೇರಿತ್ತು. ಈ ನಿರಂತರ ಒತ್ತಡ ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಬಡ ಕುಟುಂಬಕ್ಕೆ ಇದನ್ನು ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದೆ. ಕಳೆದ ಎರಡು ದಿನಗಳಲ್ಲಿ ಈಗಾಗಲೇ 76,000 ಡಾಲರ್ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದರಲ್ಲಿ ಚಂದು ಅವರ ಕುಟುಂಬ ಮಾಡಿರುವ ಸಾಲವನ್ನು ತೀರಿಸಲು 25,000 ಡಾಲರ್ ಹಣವನ್ನು ಅವರ ಹೆತ್ತವರಿಗೆ ನೀಡಲು ನಿರ್ಧರಿಸಲಾಗಿದೆ.
