ಉದಯವಾಹಿನಿ , ಭಾರತೀಯರ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಹೆಮ್ಮೆಯ ಆಹಾರವಾದ ಮಸಾಲ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಪ್ರಸಿದ್ಧ ಅಂತರಾಷ್ಟ್ರೀಯ ಆಹಾರ ಮಾರ್ಗದರ್ಶಿ ‘ಟೇಸ್ಟ್ ಅಟ್ಲಾಸ್’ ಪ್ರಕಟಿಸಿರುವ ಮೇ 2026ರ ವಿಶ್ವದ ’50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ’ ಪಟ್ಟಿಯಲ್ಲಿ ಮಸಾಲ ದೋಸೆಗೆ 6ನೇ ಸ್ಥಾನ ಲಭಿಸಿದೆ. ವಿಶ್ವದಾದ್ಯಂತ ಇರುವ ವಿವಿಧ ಬಗೆಯ ತಿಂಡಿಗಳನ್ನು ಹಿಂದಿಕ್ಕಿ, ಮಸಾಲ ದೋಸೆ ಈ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತೀಯ ಆಹಾರ ಪದ್ಧತಿಯ ಖ್ಯಾತಿಯನ್ನು ಹೆಚ್ಚಿಸಿದೆ.
ವಿಶ್ವದ ವಿವಿಧ ಮೂಲೆಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ರೇಟಿಂಗ್ ಆಧಾರದ ಮೇಲೆ ಮಸಾಲ ದೋಸೆಗೆ 4.3 ಸ್ಟಾರ್ ರೇಟಿಂಗ್ ನೀಡಲಾಗಿದೆ. ಒಟ್ಟು 50 ಖಾದ್ಯಗಳ ಪೈಕಿ ಮಸಾಲ ದೋಸೆ 6ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಸಾಲ ದೋಸೆಯ ಗರಿಗರಿಯಾದ ವಿನ್ಯಾಸ, ಒಳಗಿನ ಮಸಾಲೆಭರಿತ ಆಲೂಗೆಡ್ಡೆ ಪಲ್ಯ ಮತ್ತು ಅದನ್ನು ಚಟ್ನಿ-ಸಾಂಬಾರ್ ಜೊತೆಗೆ ಸವಿಯುವ ಶೈಲಿಯನ್ನು ಟೇಸ್ಟ್ ಅಟ್ಲಾಸ್ ವಿಶೇಷವಾಗಿ ಶ್ಲಾಘಿಸಿದೆ.
ದಕ್ಷಿಣ ಭಾರತದ ರುಚಿಗೆ ಜಾಗತಿಕ ಮನ್ನಣೆ:
ಸಾಮಾನ್ಯವಾಗಿ ವಿದೇಶಗಳಲ್ಲಿ ‘ಪ್ಯಾನ್‌ಕೇಕ್’ ಎಂದರೆ ಸಿಹಿಯಾದ ತಿಂಡಿ ಎಂಬ ಭಾವನೆ ಇದೆ. ಆದರೆ, ಭಾರತದ ಈ ಖಾರವಾದ ಮತ್ತು ಸತ್ವಯುತವಾದ ಮಸಾಲ ದೋಸೆ, ಅಂತರಾಷ್ಟ್ರೀಯ ಮಟ್ಟದಲ್ಲಿ ‘ಪ್ಯಾನ್‌ಕೇಕ್ ಪಾರ್ಟಿ’ಯನ್ನು ಧೂಳೀಪಟ ಮಾಡಿ ಜಾಗತಿಕ ಆಹಾರ ಪ್ರಿಯರ ಮೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟನ್ನು ಹುದುಗಿಸಿ ತಯಾರಿಸುವ ಈ ದೋಸೆ, ಆರೋಗ್ಯ ಮತ್ತು ರುಚಿಯ ದೃಷ್ಟಿಯಿಂದಲೂ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
