ಉದಯವಾಹಿನಿ , ಕನ್ನಡ ಸಿನಿಮಾ ರಂಗದ 22 ವರ್ಷದ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರಿಗೆ 79ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಡೆಯುವ ವರ್ಲ್ಡ್ ವುಮನ್ ಕೇನ್ಸ್ ಅಜೆಂಡಾ 2026 ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಹ್ವಾನ ಬಂದಿದೆ. ಕನ್ನಡದ ನಿರ್ದೇಶಕಿಯೊಬ್ಬರಿಗೆ ಸಿಕ್ಕಿರುವ ಮೊದಲ ಅವಕಾಶ ಇದಾಗಿದೆ. ಕರೆನ್ ಅವರು ಫೋರ್ಬ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್, ಎಮ್ಮಿ ವಿಜೇತ ನಟಿ ಶೋಹ್ರೆ ಅಗ್ದಾಶ್ಲೂ, ನಟಿ ಟಮೆರಾ ಮೌರಿ ಮತ್ತು USC ಅನೆನ್ಬರ್ಗ್ ಇನ್ಕ್ಲೂಷನ್ ಇನಿಶಿಯೇಟಿವ್‌ನ ಸಂಸ್ಥಾಪಕಿ ಸ್ಟೇಸಿ ಸ್ಮಿತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ವಿಶೇಷ.
ಮೇ 12, 13 ರಂದು ನಡೆಯಲಿರುವ ಈ ಶೃಂಗಸಭೆಯಲ್ಲಿ ಕರೆನ್ ಅವರು ಸಿನಿಮಾ, ಎಐ ಮತ್ತು ಸಾಮಾಜಿಕ ಕ್ರಿಯಾಶೀಲತೆ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು 10 ಲಕ್ಷಕ್ಕೂ ಹೆಚ್ಚು ವೀಕ್ಷಕರಿಗೆ ಜಾಗತಿಕವಾಗಿ ಮರು-ಪ್ರಸಾರವಾಗಲಿದೆ. ಕರೆನ್ ನಿರ್ದೇಶನದ ಚೊಚ್ಚಲ ಹಿಂದಿ-ಕನ್ನಡ ಚಿತ್ರ ‘ಸೆಪ್ಟೆಂಬರ್ 21’ ಇದೇ ಮೇ 16, 2026 ರಂದು ಸಂಜೆ 5:45ಕ್ಕೆ ಪಾಲೈಸ್ ಥಿಯೇಟರ್, ಕೇನ್ಸ್‌ನಲ್ಲಿ ಮಾರ್ಷೆ ಡು ಫಿಲ್ಮ್ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ. ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಅಗೋಚರ ಹೋರಾಟದ ಕುರಿತಾದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ, ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಅನುಮೋದಿತ ಈ ಚಿತ್ರವು ಈ ಹಿಂದೆ ಗೋವಾದ 56ನೇ IFFI ನಲ್ಲಿ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಮೇ 22 ರಂದು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಅವರು ಹೆಮ್ಮೆಯಿಂದ ಮಾತಾಡಿದ್ದಾರೆ.
ಕೇನ್ಸ್‌ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!