ಉದಯವಾಹಿನಿ , ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಮಿಂಚಿದ್ದಾರೆ. ರಿತೇಶ್ ದೇಶ್ಮುಖ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ರಾಜ ಶಿವಾಜಿ’ ಬಿಡುಗಡೆ ಆಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಐತಿಹಾಸಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಜೀವಾ ಮಹಾಲಾ ಎಂಬ ವೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ಮತ್ತು ವಿಡಿಯೋಗಳು ಎಕ್ಸ್ (ಟ್ವಿಟರ್) ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ.
ಕೇಸರಿ ಪೇಟ, ಕುರ್ತಾ ಧರಿಸಿ, ಕೈಯಲ್ಲಿ ಮರಾಠಾ ಖಡ್ಗ ಹಿಡಿದು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆಯೇ ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗಿದೆ. ಸಲ್ಮಾನ್ ಅವರ ಈ ಲುಕ್ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ‘ಇಡೀ ಸಿನಿಮಾ ಒಂದು ಕಡೆಯಾದರೆ, ಸಲ್ಮಾನ್ ಖಾನ್ ಅವರ ಎಂಟ್ರಿಯೇ ಒಂದು ಕಡೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಲ್ಮಾನ್ ಅವರ ಈ ಲುಕ್ ನೋಡಿ ಅವರ ಹಳೆಯ ‘ವೀರ್’ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ.ಈ ವಿಶೇಷ ಪಾತ್ರ ಸಲ್ಮಾನ್ ಅವರಿಗೆ ಸಿಕ್ಕಿದ್ದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ನಿರ್ದೇಶಕ ರಿತೇಶ್ ದೇಶ್ಮುಖ್ ಇತ್ತೀಚೆಗೆ ಇದನ್ನು ಹಂಚಿಕೊಂಡಿದ್ದರು.
ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸಲ್ಮಾನ್ ಈ ಸಿನಿಮಾದ ಬಗ್ಗೆ ಕೇಳಿದರು. ಚಿತ್ರದಲ್ಲಿ ತಮಗೇನು ಪಾತ್ರವಿದೆ ಎಂದು ಪ್ರಶ್ನಿಸಿದರು. ನಾನು ಅವರಿಗೆ ಯಾವುದೇ ಪಾತ್ರ ಇನ್ನು ಯೋಚಿಸಿಲ್ಲ ಎಂದಾಗ, ‘ನನ್ನನ್ನು ಬಿಟ್ಟು ನೀನು ಈ ಸಿನಿಮಾ ಮಾಡಲು ಸಾಧ್ಯವಿಲ್ಲ, ನಾನೂ ಇದರಲ್ಲಿ ಇರಲೇಬೇಕು’ ಅಂತ ಸಲ್ಮಾನ್ ಪಟ್ಟು ಹಿಡಿದರು’ ಎಂದು ರಿತೇಶ್ ಸ್ಮರಿಸಿದ್ದಾರೆ. ಸಲ್ಮಾನ್ ಅವರ ಈ ಪ್ರೀತಿ ಮತ್ತು ಸಿನಿಮಾದ ಮೇಲಿರುವ ಗೌರವದಿಂದಾಗಿ ಅವರಿಗಾಗಿ ‘ಜೀವಾ ಮಹಾಲಾ’ ಪಾತ್ರವನ್ನು ಸೃಷ್ಟಿಸಲಾಯಿತು.
