ಉದಯವಾಹಿನಿ ಮಾರುಕಟ್ಟೆಯಲ್ಲಿ ತೂಗುತ್ತಿರುವ ರಸಭರಿತ ಹಣ್ಣು-ತರಕಾರಿಗಳನ್ನು ಹೊತ್ತು ತರುವುದು ಎಷ್ಟೋ ಜನರಿಗೆ ಬಹಳ ಪ್ರಿಯವಾದ ಸಂಗತಿ. ತಂದ ಮೇಲೆ ಅವುಗಳನ್ನು ತೊಳೆದು ಶುಚಿಗೊಳಿಸುವುದು ರೇಜಿಗೆಯ ಕೆಲಸ. ಅದರಲ್ಲೂ ದ್ರಾಕ್ಷಿಯಂಥ (Grapes) ಹಣ್ಣುಗಳನ್ನು ತಂದರೆ, ʻಗುಳುಂʼ ಮಾಡುವುದು ಎಷ್ಟು ಇಷ್ಟವೋ, ಅದನ್ನು ತೊಳೆದು ಸ್ವಚ್ಛ ಮಾಡುವುದು ಅಷ್ಟೇ ಕಷ್ಟ. ಅದರಲ್ಲೂ ಅತಿಯಾಗಿ ಕೀಟನಾಶಕ ಸಿಂಪಡಿಸಿಕೊಳ್ಳುವ ಮತ್ತು ಗೊಂಚಲಾಗಿ ತೂಗುವ ದ್ರಾಕ್ಷಿಯಂಥ ಹಣ್ಣುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರ ಕಶ್ಮಲಗಳೆಲ್ಲ ಸೇರುವುದು ನಮ್ಮದೇ ಹೊಟ್ಟೆಗೆ. ಹಾಗಾದರೆ ದ್ರಾಕ್ಷಿಯಂಥವನ್ನು ತೊಳೆದು ಸ್ವಚ್ಛಗೊಳಿಸುವುದು ಹೇಗೆ?
ನಾವು ಸೇವಿಸುವ ಹಣ್ಣು-ತರಕಾರಿಗಳೆಲ್ಲವೂ ಸ್ಥಳೀಯವಾಗಿ ಬೆಳೆಯುವಂಥದ್ದಾದರೆ ಕೊಳೆ, ದೂಳು, ರೋಗಾಣುಗಳು ಮತ್ತು ಸಂರಕ್ಷಕಗಳಿಗೆ ಹೆಚ್ಚು ಒಡ್ಡಿಕೊಳ್ಳುವ ಮುನ್ನವೇ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆಯಾದರೂ ಇರಬಹುದು. ಆದರೆ ಕೆಲವು ಪ್ರದೇಶಗಳಲ್ಲಿ ಕೆಲವು ಬೆಳೆಗಳು ಬೆಳೆಯುವುದಿಲ್ಲ. ಸೇಬು, ದ್ರಾಕ್ಷಿ, ಕಿತ್ತಳೆಯಂಥವು ಎಲ್ಲೋ ಬೆಳೆದು ಎಲ್ಲಿಗೋ ಹೋಗಿ ಮಾರಾಟ ವಾಗುವಂಥವು. ಆಗ ಸಂರಕ್ಷಕಗಳನ್ನು ಬಳಕೆ ಮಾಡುವುದು ಸಾಮಾನ್ಯ. ಮಾವಿನಂಥ ಬೆಳೆಗಳ ಹಾಗೆ ಬೆಳೆಯುವಾಗಲೇ ಕೀಟನಾಶಗಳ ಅಭಿಷೇಕ ಮಾಡಿಸಿಕೊಂಡಿದ್ದರಂತೂ, ಅವುಗಳ ಶೇಷ ತೆಗೆಯುವುದು ದೊಡ್ಡ ಸಾಹಸ. ಇವುಗಳನ್ನು ತಿನ್ನುವ ಮುನ್ನ ಏನು ಮಾಡಬಹುದು?
ಹರಿಯುವ ನೀರು: ಹಣ್ಣು ಹರಿಯುವ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವುದು ಎಲ್ಲಕ್ಕಿಂತ ಸುಲಭ ಮತ್ತು ಸುರಕ್ಷಿತವಾದ ಸ್ವಚ್ಛತಾ ಮಾರ್ಗ. ಆದರೆ ದ್ರಾಕ್ಷಿಯ ಗೊಂಚಲಿನಲ್ಲಿ ತೂಗುವ ಎಲ್ಲಾ ಹಣ್ಣುಗಳನ್ನೂ ನಲ್ಲಿಯಡಿ ಹಿಡಿದು, ತೊಳೆದು ಶುಚಿ ಮಾಡುವುದು ಆಗದ ಕೆಲಸ. ಹಾಗೆ ಮಾಡಲು ಪ್ರಯತ್ನಿಸಿದರೆ ಹಣ್ಣುಗಳೆಲ್ಲ ಉದುರಿ ಚೆಲ್ಲಾಪಿಲ್ಲಿಯಾಗುವುದು ನಿಶ್ಚಿತ. ಆದರೆ ಸ್ವಚ್ಛವಾಗಿ ತೊಳೆಯುವುದರಿಂದಲೇ ಬಹಳಷ್ಟು ರಾಸಾಯನಿಕ ಶೇಷ ಮತ್ತು ಕೊಳೆ-ಕಶ್ಮಲಗಳನ್ನು ನಿವಾಳಿಸಬಹುದು ಎನ್ನುವುದೂ ಸತ್ಯ ತಾನೆ?
ನೆನೆಸಿಡಿ: ದೊಡ್ಡದೊಂದು ಪಾತ್ರೆಯಲ್ಲಿ ನೀರು ತುಂಬಿ ಹತ್ತಿಪ್ಪತ್ತು ನಿಮಿಷಗಳ ಕಾಲ ದ್ರಾಕ್ಷಿಯನ್ನು ಗೊಂಚಲಿನಲ್ಲೇ ನೆನೆಸಿಡಿ. ನಂತರ ಚಮಚವೊಂದನ್ನು ಹಾಕಿ ದ್ರಾಕ್ಷಿಗಳನ್ನು ಲಘುವಾಗಿ ಕಲಕಿ ಅಥವಾ ಕೈ ಹಾಕಿ ಕದಡಿ. ನೀರು ಬಸಿದು, ಇನ್ನೊಂದೆರಡು ಬಾರಿ ಹೀಗೆಯೇ ಮಾಡಿ. ದ್ರಾಕ್ಷಿ ಬೆಳೆಗೆ ರಾಸಾಯನಿಕಗಳ ಸೇಚನೆ ಮಾಮೂಲಿಯಾದ್ದರಿಂದ, ಈ ಕ್ರಮಗಳ ಮೂಲಕ ನೀರಿನಲ್ಲಿ ಕರಗಬಹುದಾದ ರಾಸಾಯನಿಕಗಳನ್ನೆಲ್ಲ ತೆಗೆಯಬಹುದು. jತೆಗೆ ದೂಳು, ಕೊಳೆ, ಸಣ್ಣ ಕೀಟಗಳನ್ನೆಲ್ಲ ಸ್ವಚ್ಛ ಮಾಡಬಹುದು.  ಉಪ್ಪು, ಸೋಡಾ, ವಿನೇಗರ್‌: ನೀರಿನಲ್ಲಿ ದ್ರಾಕ್ಷಿಗಳನ್ನು ನೆನೆಸುವಾಗ ಒಂದು ಚಮಚ ಉಪ್ಪು ಹಾಕಿ ಹತ್ತಿಪ್ಪತ್ತು ನಿಮಿಷಗಳ ಕಾಲ ನೆನೆಸಿ. ಇದರಿಂದ ಹಲವು ರೀತಿಯ ರೋಗಾಣುಗಳನ್ನು ನಾಶ ಮಾಡಬಹುದು. ಉಪ್ಪಿನ ಬದಲಿಗೆ, ಅಡುಗೆ ಸೋಡಾ ಹಾಕುವ ಕ್ರಮವೂ ಉಪಯುಕ್ತ. ಇದರಿಂದಲೂ ಹಲವು ರೀತಿಯ ಬ್ಯಾಕ್ಟೀರಿಯಗಳನ್ನು ನಾಶಪಡಿಸಬಹುದು. ಮೊದಲಿಗೆ ಹಣ್ಣು-ತರಕಾರಿಗಳನ್ನು ನೆನೆಸುವ ಹಂತದಲ್ಲಿ ವಿನೇಗರ್‌ ಹಾಕುವ ಕ್ರಮವೂ ಉಪಯುಕ್ತ.

Leave a Reply

Your email address will not be published. Required fields are marked *

error: Content is protected !!