ಉದಯವಾಹಿನಿ, ಬೆಂಗಳೂರು: ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ಮತ್ತೆ ಜೋರಾಗಿದೆ. ನೀ ಕೊಡಲ್ಲ, ನಾ ಬಿಡಲ್ಲ ಎನ್ನುವಂತಾಗಿದೆ ಸಾರಿಗೆ ನೌಕರರ ಸ್ಥಿತಿ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ನಿಗಮಗಳ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆ ಇದೀಗ ಸಾರಿಗೆ ನೌಕರರು ಮತ್ತೆ ಹೋರಾಟದ ಹಾದಿ ಹಿಡಿದಿದ್ದಾರೆ. ಮೇ 20ರಿಂದ ರಾಜ್ಯ ಸಾರಿಗೆ ಸ್ತಬ್ಧವಾಗಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್‌ಗಳು ರಸ್ತೆಗಿಳಿಸದಿರಲು ನಿರ್ಧರಿಸಲಾಗಿದೆ.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸುದ್ದಿಗೋಷ್ಠಿ ನಡೆಸಿ ಮುಂದಿನ ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಸಾರಿಗೆ ನೌಕರರ ಸಂಘಟನೆ ದೃಢ ನಿರ್ಧಾರ ಮಾಡಿದೆ. ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಬಾರಿ ಸರ್ಕಾರಕ್ಕೆ ಜೋರಾಗಿಯೇ ಬಿಸಿ ಮುಟ್ಟಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.
