ಉದಯವಾಹಿನಿ, ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಮರುಮತ ಎಣಿಕೆಯಲ್ಲಿ 2 ಮತ ಹೆಚ್ಚಾಗಿದ್ದು, ರಾಜೇಗೌಡ ಅವರು ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ.ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಇಂದು ಐಡಿಎಸ್‌ಜಿ ಕಾಲೇಜಿನಲ್ಲಿ ನಡೆಯಿತು. ಈ ಹಿಂದೆ ಸಾಮಾನ್ಯ ಮತ ಎಣಿಕೆ ಬಳಿಕ 201 ಮತಗಳಿಂದ ಗೆಲುವು ಸಾಧಿಸಿದ್ದ ರಾಜೇಗೌಡ ಅವರು, ಮರು ಮತ ಎಣಿಕೆ ಬಳಿಕ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲಿಗೆ 20 ಟ್ರಂಕ್‌ಗಳಲ್ಲಿ ಭದ್ರಗೊಳಿಸಿದ್ದ 1,822 ಅಂಚೆ ಮತಗಳ ಪೈಕಿ ಅಧಿಕಾರಿಗಳು ಬಂಡಲ್‌ನಂತೆ ಬೇರ್ಪಡಿಸಿದರು. ತಿರಸ್ಕೃತಗೊಂಡ 279 ಮತಗಳನ್ನ ಪ್ರತ್ಯೇಕವಾಗಿ ವಿಂಗಡಿಸಿ, ಉಳಿದ 1,540 ಮತಗಳನ್ನು 25 ಮತಪತ್ರಗಳನ್ನು ಒಂದು ಬಂಡಲ್‌ನಂತೆ ವಿಂಗಡಿಸಿದ್ರು.
ಈ ವೇಳೆ ಕೆಲವು ಟ್ರಂಕ್‌ಗಳು ಜಖಂಗೊಂಡಿರುವುದು ಕಂಡುಬಂದವು. ಸೀಲ್‌ ಇಲ್ಲದ ಟ್ರಂಕ್‌ ಕೂಡ ಪತ್ತೆಯಾದ ಹಿನ್ನೆಲೆ ಭಾರೀ ಹೈಡ್ರಾಮಾವೇ ನಡೆಯಿತು. ಕೊನೆಗೆ ಅಂಚೆಮತಗಳ ಟ್ರಂಕ್‌ ಸೇಫಾಗಿದೆ. ಯಾವುದೇ ಗೊಂದ ಇಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬಳಿಕ ಮತ ಎಣಿಕೆಗೆ ಅನುವು ಮಾಡಿಕೊಟ್ಟರು. ಬಳಿಕ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!