ಉದಯವಾಹಿನಿ, ಚಿಕ್ಕಮಗಳೂರು: ಶೃಂಗೇರಿಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಮುನ್ನಡೆ ಸಾಧಿಸಿರುವ ಹಿನ್ನಲೆ ಶೃಂಗೇರಿಯ ಶಾರದಾ ಮಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದರು.
ಅಂಚೆ ಮತಗಳ ಮರು ಎಣಿಕೆಯಲ್ಲಿ 52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಮೇಲುಗೈ ಸಾಧಿಸಿದ್ದಾರೆ. ಈ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಿದ್ದ ಜೀವರಾಜ್ ಅವರಿಗೆ ದೇವಸ್ಥಾನದ ಸಮೀಪವೇ ಕಾರ್ಯಕರ್ತರು ಅಭಿನಂದಿಸಿದರು. ಮತಗಳ ಮರುಎಣಿಕೆ ಈಗಾಗಲೇ ಪೂರ್ಣಗೊಂಡಿದ್ದು ಚುನಾವಣಾ ಅಧಿಕಾರಿಗಳಿಂದ ಫಲಿತಾಂಶ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಮತ ಎಣಿಕೆಯ ಫಲಿತಾಂಶವನ್ನು ಕೋರ್ಟ್ ರವಾನೆ ಮಾಡಲಾಗಿದೆ. ಈ ಕುರಿತು ಚುನಾವಣಾ ಅಧಿಕಾರಿ ಮಾತನಾಡಿ, ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ಪೂರ್ಣವಾಗಿದೆ. ಮರು ಎಣಿಕೆಯನ್ನು ಅಂಚೆ ಮತಗಳದ್ದಷ್ಟೇ ಮಾಡಲಾಗಿದೆ. 1822 ಅಂಚೆ ಮತಗಳನ್ನ ಮರು ಪರಿಶೀಲನೆ, ಎಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
