ಉದಯವಾಹಿನಿ, ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಹೈವೋಲ್ಟೇಜ್ ಉಪಸಮರದ ಫಲಿತಾಂಶ ಸೋಮವಾರ ಹೊರಬೀಳಲಿದೆ. ಪವರ್ ಫೈಟ್, ಮುಸ್ಲಿಂ ಸಮುದಾಯದ ಅಸಮಾಧಾನ, ಪಂಚ ಗ್ಯಾರಂಟಿ ಪರಿಷ್ಕರಣೆ ಬೇಕು-ಬೇಡಗಳ ಮಧ್ಯೆ ಈ ರಿಸಲ್ಟ್ ಹಲವು ಲೆಕ್ಕಾಚಾರ, ವ್ಯಾಖ್ಯಾನಗಳಿಗೆ ಎಡೆಮಾಡಿಕೊಡಲಿದೆ. ಬಹುತೇಕ ಮೂರು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಾಭಿಪ್ರಾಯ ಗೊತ್ತುಪಡಿಸುವ ಉಪಸಮರವಾಗಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್ಗೆ ಇದು ಪ್ರತಿಷ್ಠೆಯ, ಗೆಲ್ಲಲೇಬೇಕಾದ ಉಪಚುನಾವಣೆಯಾಗಿದೆ. ಇತ್ತ ಬಿಜೆಪಿಗೂ ಇದು ಆತ್ಮವಿಶ್ವಾಸ ಹೆಚ್ಚಿಸುವ, ಬಿ.ವೈ. ವಿಜಯೇಂದ್ರ ಅವರ ರಾಜ್ಯ ಅಧ್ಯಕ್ಷಗಿರಿ ಓರೆಗೆ ಹಚ್ಚುವ, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನವಿರೋಧ ಇದೆ ಎಂಬುದನ್ನು ಪುಷ್ಟೀಕರಿಸುವ ಫಲಿತಾಂಶವಾಗಲಿದೆ. ಹೀಗಾಗಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಗೆ ಈ ಉಪಸಮರದ ಫಲಿತಾಂಶ ಮುಂದಿನ ರಾಜಕೀಯ ದಿಕ್ಸೂಚಿ, ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಡಲಿದೆ.
ಕಾಂಗ್ರೆಸ್ ಆಡಳಿತಕ್ಕೆ ಎರಡನೇ ಉಪಸಮರ ಫೈಟ್: ರಾಜ್ಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇದು ಎರಡನೇ ಉಪಸಮರದ ಅಗ್ನಿಪರೀಕ್ಷೆಯಾಗಿದೆ. ಈ ಹಿಂದೆ 2024 ನವೆಂಬರ್ನಲ್ಲಿ ಮೂರು ಕ್ಷೇತ್ರಗಳಾದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರಲ್ಲಿ ನಡೆದ ಮೊದಲ ಉಪಸಮರದಲ್ಲಿ ಕಾಂಗ್ರೆಸ್ ಮೂರೂ ಕಡೆ ಗೆದ್ದು ಬೀಗಿತ್ತು. ಕಾಂಗ್ರೆಸ್ ಆಡಳಿತ ವಹಿಸಿದ ಸುಮಾರು ಒಂದೂವರೆ ವರ್ಷದೊಳಗೆ ನಡೆದ ಈ ಉಪಸಮರದಲ್ಲಿ ಕಾಂಗ್ರೆಸ್ಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು.
ಇದೀಗ ಹಾಲಿ ಶಾಸಕರ ಸಾವಿನಿಂದ ತೆರವಾದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡನೇ ಉಪಸಮರವಾಗಿದೆ. ಇದು ಕಾಂಗ್ರೆಸ್ ಅಧಿಕಾರ ವಹಿಸಿದ ಸುಮಾರು ಮೂರು ವರ್ಷಗಳ ಹೊಸ್ತಿಲಲ್ಲಿ ಎದುರಾದ ಉಪಚುನಾವಣೆಯಾಗಿದೆ. ಮೂರು ವರ್ಷದಲ್ಲಿನ ಸರ್ಕಾರದ ಕಾರ್ಯವೈಖರಿ ಉಪಸಮರದ ಮೇಲೆ ಬಹುವಾಗಿ ಪರಿಣಾಮ ಬೀರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮುಕ್ಕಾಲು ಭಾಗ ಆಡಳಿತ ಪೂರೈಸಿದ್ದು, ಆಡಳಿತ ವಿರೋಧಿ ಅಲೆ ಇದೆಯೋ ಇಲ್ಲವೋ ಎಂಬ ಸಣ್ಣದಾದ ಸಂಕೇತವನ್ನು ಇದು ನೀಡಲಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಎರಡನೇ ಉಪಸಮರ ರಿಪೋರ್ಟ್ ಕಾರ್ಡ್ ನೀಡುವ ಅಗ್ನಿಪರೀಕ್ಷೆಯಾಗಿದೆ.
ಕಾಂಗ್ರೆಸ್ ಪವರ್ ಫೈಟ್ ಮಧ್ಯೆ ಉಪಸಮರ ರಿಸಲ್ಟ್: ಇತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯೆ ನಾಯಕತ್ವ ಬದಲಾವಣೆಯ ಪವರ್ ಫೈಟ್ ನಡೆಯುತ್ತಿದೆ. ಮೇ 4ರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಪವರ್ ಫೈಟ್ ಕ್ಲೈಮಾಕ್ಸ್ ಹಂತಕ್ಕೆ ಬರಲಿದೆ ಎಂಬ ಚರ್ಚೆ ಜೋರಾಗಿದೆ. ರಾಜ್ಯದ ಎರಡು ಕ್ಷೇತ್ರಗಳ ಉಪಸಮರದ ಫಲಿತಾಂಶವೂ ಹೊರಬೀಳಲಿದೆ. ಆ ಮೂಲಕ ಪವರ್ ಫೈಟ್ ಮಧ್ಯೆ ಉಪಸಮರದ ಫಲಿತಾಂಶ ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಡಲಿದೆ.ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಕಾಂಗ್ರೆಸ್ ಎರಡು ಕ್ಷೇತ್ರಗಳನ್ನು ಗೆದ್ದರೆ ಒಂದು ಲೆಕ್ಕಾಚಾರ, ಎರಡರ ಪೈಕಿ ಒಂದು ಸೋತರೆ ಮತ್ತೊಂದು ಲೆಕ್ಕಾಚಾರ, ಎರಡೂ ಸೋತರೆ ಇನ್ನೊಂದು ರಾಜಕೀಯ ಲೆಕ್ಕಾಚಾರ ನಡೆಯಲಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳನ್ನು ಗೆದ್ದರೆ ಸಿಎಂ ಸಿದ್ದರಾಮಯ್ಯ ನಾಯಕತ್ವ ಗಟ್ಟಿಯಾಗಿದೆ, ಅಹಿಂದ ನಾಯಕತ್ವಕ್ಕೆ ಜನಬೆಂಬಲ ಇದೆ ಎಂಬ ಚರ್ಚೆ ಮುನ್ನಲೆಗೆ ಬರಲಿದೆ.
