ಉದಯವಾಹಿನಿ, ಬಾಗಲಕೋಟೆ: ‘ಮುಂಗಾರಿ ಹಿಂಗಾರಿ ತಕ್ಕಷ್ಟ ಮಸನ’ ಎಂದು ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಮರ ಏರಿ ಗೊರವಪ್ಪ ಕಾರ್ಣಿಕ ನುಡಿದರು. ಇದು ಪ್ರತಿ ವರ್ಷ ಆಗಿ ಹುಣ್ಣಿಮೆ ದಿನದಂದು ನಡೆಯುವ ಜಾತ್ರೆಯ ವಿಶೇಷವಾಗಿದೆ. ಸಾಮಾನ್ಯವಾಗಿ ಜಾತ್ರೆ ಅಂದರೆ ಸಾಕು ರಥೋತ್ಸವ, ತೇರು ಎಳೆಯುವುದನ್ನು ಕಾಣುತ್ತೇವೆ. ಆದರೆ ಗುಡೂರ ಗ್ರಾಮದ ಈ ಹುಲ್ಲೇಶ್ವರ ದೇವಾಲಯದ ಜಾತ್ರೆಯು ವಿಭನ್ನವಾಗಿದ್ದು, ಐತಿಹಾಸಿಕ ಹಿನ್ನೆಲೆ ಪಡೆದುಕೊಂಡಿದೆ. ಇಲ್ಲಿ ಜಾತ್ರೆ ಅಂದರೆ ರಥೋತ್ಸವ ಇರುವುದಿಲ್ಲ ಬದಲಾಗಿ ಓಡುವ ಜಾತ್ರೆ ಎಂದು ಹೆಸರುವಾಸಿಯಾಗಿದೆ.

ಹುಲ್ಲಪ್ಪ ಚಂದಪ್ಪ ಎಂಬುವರು ದೇವರು ರೂಪದಲ್ಲಿ ಬಂದು ರಾಕ್ಷಸರ ಸಂಹಾರ ಮಾಡಿ, ಗುಡೂರ ಬೆಟ್ಟದ ಮೇಲಿಂದ ಜಿಗಿದು ಈ ಸ್ಥಳದಲ್ಲಿ ಯಜ್ಞ ಮಾಡಿ ಮಾಯ ಆಗಿದ್ದಾರೆ ಎಂಬ ಐತಿಹ್ಯದ ಹಿನ್ನೆಲೆ ಇದೆ ಎಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ. ಹೀಗಾಗಿ ಈ ಗ್ರಾಮದ ದೇವರಾಗಿರುವ ಹುಲ್ಲಪ್ಪ ಚಂದಪ್ಪ ದೇವರಿಗೆ ಪ್ರತಿ ವರ್ಷ ಆಗಿ ಹುಣ್ಣಿಮೆಗೆ ಜಾತ್ರೆ ನಡೆಯುತ್ತದೆ.

ಜಾತ್ರೆ ಹಿನ್ನೆಲೆ ಕಂಬಳಿ ಹಾಕಿರುವ ಮಳಿಯಪ್ಪ ಅಜ್ಜನವರು ಎಂದು ದೇವರಿಗೆ ಪೂಜೆ ಸಲ್ಲಿಸಿ, ಕೈಯಲ್ಲಿ ಶಂಕುವನ್ನು ಹಿಡಿದು ಊದುತ್ತಾ, ಮೈಯಲ್ಲಿ ದೇವರು ಬಂದ ನಂತರ ಗ್ರಾಮ ಹೊರವಲಯದಲ್ಲಿರುವ ಈ ಹುಣಸಿಮರದ ಹತ್ತಿರ ಡೊಳ್ಳು ಹಾಗೂ ಇತರೆ ವಾದ್ಯಗಳೊಂದಿಗೆ ಗ್ರಾಮದ ಜನತೆ ಸೇರಿದಂತೆ ಸುತ್ತಮುತ್ತಲಿನ ಊರಿನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಆಗ ಮಳಿಯಪ್ಪಜ್ಜನವರು, ಮರದ ಪಕ್ಕದಲ್ಲಿ ಇರುವ ತಮ್ಮ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ, ಮಳೆ ಬೆಳೆ ಬಗ್ಗೆ ಭವಿಷ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ನಂತರ ಹುಣಸಿ ಮರದ ಮೇಲೆ ಹತ್ತಿ ಮಳಿಯಪ್ಪ ಮೊದಲು ಹ್ಯುತ್ ಅಂತ ಕೂಗುತ್ತಾರೆ. ಆಗ ಸೇರಿದ ಸಾವಿರಾರು ಸಂಖ್ಯೆಯ ಭಕ್ತರು ನಿಶ್ಯಬ್ಧರಾಗುತ್ತಾರೆ. ಮಳಿಯಪ್ಪ ಮುಂಗಾರಿ ಹಿಂಗಾರಿ ತಕ್ಕಷ್ಟ ಮಸನ ಎಂದು ಕೂಗಿ‌ ಭವಿಷ್ಯ ಹೇಳಿದರು. ಅಲ್ಲಿ ನೆರೆದಿದ್ದ ಸಾವಿರಾರು ಜನರು, ಹುಣಸಿಮರದ ಎಲೆಗಳನ್ನು ಹರಿದುಕೊಂಡು ಸಂಭ್ರಮಿಸುತ್ತಾರೆ. ನಂತರ ಗ್ರಾಮದ ಪ್ರಮುಖ ರಸ್ತೆಯ ಮೂಲಕ ದೇವಾಲಯಕ್ಕೆ ಆಗಮಿಸಿ, ಬಳಿಕ ದೇವಾಲಯದ ಮುಂದೆ ಕಬ್ಬಿಣದ ಸರಪಳಿ ಹರಿಯುವ ಪದ್ಧತಿ ಇರುತ್ತದೆ.

Leave a Reply

Your email address will not be published. Required fields are marked *

error: Content is protected !!