ಉದಯವಾಹಿನಿ, ಚಾಮರಾಜನಗರ: ಮಣ್ಣು ಸಾಗಿಸುತ್ತಿದ್ದ ಲಾರಿಯು ಕಾರ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಕೇರಳ ರಸ್ತೆಯ ಮದ್ದಯ್ಯನಹುಂಡಿ ಬಳಿ ಇಂದು ನಡೆದಿದೆ. ಕೇರಳ ಮೂಲದ ಕಾರು ಚಾಲಕ ಮುನೀರ್(30), ಮುನಿರಾ(45) ಹಾಗೂ ಮೋಹಿಜ್ (3) ಎಂಬ ಬಾಲಕ ಮೃತಪಟ್ಟವರು. ಅಪಘಾತದಲ್ಲಿ ಸಾನಿಯಾ ಮಿರ್ಜಾ(22), ಸಾಹಲ್ ಪರ್ವಿನ್ (28) ಹಾಗೂ ಬಿಲಾಲ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಇವರಿಗೆ ಸಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಹಳ್ಳಕ್ಕೆ ಬಿದ್ದಿದ್ದು, ನಜ್ಜುಗುಜ್ಜಾಗಿದೆ. ಮಣ್ಣು ಮತ್ತು ಖನಿಜ ಸಾಗಾಟದ ಲಾರಿಗಳಿಂದ ಕೇರಳ ರಸ್ತೆಯಲ್ಲಿ ನಿರಂತರ ಅಪಘಾತ ಸಂಭವಿಸುತ್ತಿವೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟಿಪ್ಪರ್, ಲಾರಿಗಳ ವಿರುದ್ಧ ರೈತರ ಆಕ್ರೋಶ: ಮಣ್ಣು ಸಾಗಿಸುತ್ತಿದ್ದ ಲಾರಿಯು ಕಾರ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈತ ಸಂಘದ ಕಾರ್ಯಕರ್ತರು ದೌಡಾಯಿಸಿ ಆಕ್ರೋಶ ಹೊರಹಾಕಿದ್ದಾರೆ‌.
ಟಿಪ್ಪರ್ ಹಾಗೂ ಲಾರಿಗಳ ಅತಿವೇಗ ಮತ್ತು ಅಜಾಗರೂಕತೆಯ ಸಂಚಾರದ ವಿರುದ್ಧ ರೈತರು ಕಿಡಿಕಾರಿದ್ದು, ಇಷ್ಟು ದಿನ ಖನಿಜ ಸಾಗಾಟ ಮಾಡುತ್ತಿದ್ದರು. ಆದರೀಗ, ಕೆರೆಯ ಮಣ್ಣು ಕೂಡ ಕೇರಳಕ್ಕೆ ರವಾನೆ ಆಗುತ್ತಿದೆ. ರಾಜ್ಯದ ಫಲವತ್ತಾದ ಮಣ್ಣು ಕೇರಳ ಪಾಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ‌.
ಮಣ್ಣು ತುಂಬಿದ ಲಾರಿಗೆ ಟಾರ್ಪಲ್ ಹಾಕಿ ಸಾಗಾಟ ಮಾಡುತ್ತಿದ್ದುದು ಅಪಘಾತವಾದ ಬಳಿಕ ಬೆಳಕಿಗೆ ಬಂದಿದೆ. ಚೆಕ್ ಪೋಸ್ಟ್ ಸಿಬ್ಬಂದಿ, ಗಣಿ ಮತ್ತು ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇದು ಗೊತ್ತಿಲ್ಲವೇ ಎಂದು ರೈತರು ಕಿಡಿಕಾರಿದ್ದಾರೆ.
ಕೇರಳ ರಸ್ತೆಯಲ್ಲಿ ನಿರಂತರ ಅಪಘಾತಗಳಾಗುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಟಿಪ್ಪರ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಈಗ ಮೂವರು ಅಸುನೀಗಿದ್ದಾರೆ. ಗುಂಡ್ಲುಪೇಟೆ ಪೊಲೀಸರು ಕೇಸ್ ದಾಖಲಿಸಿಕೊಂಡು ಎರಡು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಉಡುಪಿಯಲ್ಲಿ ಇತ್ತೀಚೆಗೆ ಭೀಕರ ಅಪಘಾತ: ಕಾಲೇಜಿನಿಂದ ಪ್ರವಾಸಕ್ಕೆ ಹೊರಟಿದ್ದ ಬಸ್​ವೊಂದು ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಬೈಂದೂರಿನ ತ್ರಾಸಿಯ ಮರವಂತೆ ಬೀಚ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿತ್ತು.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ಹಂತದ ಬಿಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ 47 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 50 ಮಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!