ಉದಯವಾಹಿನಿ, ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಗೋಳೂರು ಹಾಡಿಯ ಆದಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬುದು ಅವರ ಅರಣ್ಯ ರೋದನ. ತಲೆತಲಾಂತರದಿಂದ ಕಾಡಿನಲ್ಲಿಯೇ ಜೀವಿಸುತ್ತಿರುವ ಇವರಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಇರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಹಾಡಿಯಲ್ಲಿ ಗುಂಡಿ ತೋಡಿ, ಬದಿಯಲ್ಲಿ ನೀರು ಸೋಸಿ ತೆಗೆದುಕೊಂಡು ಹೋಗುತ್ತಿರುವ ಇಲ್ಲಿನ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೃದ್ಧೆಯೊಬ್ಬರು ಕೊಳೆ ನೀರನ್ನು ಕುಡಿದು ನಮ್ಮ ಮನೆ ಮಕ್ಕಳು, ಬಾಣಂತಿಯರು ಸೇರಿದಂತೆ ಎಲ್ಲರೂ ಇದೇ ನೀರು ಕುಡಿಯುತ್ತಿದ್ದೇವೆ. ನಮಗೆ ಆರೋಗ್ಯ ಸಮಸ್ಯೆ ಎದುರಾದರೆ ಯಾರು ನೋಡುತ್ತಾರೆ? ಎಂದು ನೋವು ತೋಡಿಕೊಂಡರು. ಹಳ್ಳದಲ್ಲಿ ನೀರು ತೆಗೆದುಕೊಳ್ಳುವವರು, ಹರಿಯುವ ನೀರನ್ನು ಕೊಡದಲ್ಲಿ ತುಂಬಿಸಿಕೊಳ್ಳುವವರು ಇಂತಹ ನೀರು ಕುಡಿದು ನಾವೇ ಜೀವಿಸಬೇಕೇ?, ಚುನಾವಣೆ ಬಂದಾಗ ರಾಜಕಾರಣಿಗಳು ಕಾಲಿಗೆ ಬೀಳುತ್ತಾರೆ. ಈಗ ಅವರೆಲ್ಲಾ ಎಲ್ಲಿದ್ದಾರೆ? ಅಧಿಕಾರಿಗಳು ನಮ್ಮ‌ ಸಮಸ್ಯೆ ಪರಿಹರಿಸಲು ಬರುತ್ತಿಲ್ಲ ಎಂದು ಸಂಕಟ ವ್ಯಕ್ತಪಡಿಸಿದರು.
ದೂರವಾಣಿ‌ಯಲ್ಲಿ ಮಾತನಾಡಿದ ಆದಿವಾಸಿ ಮುಖಂಡ ವಿಜಯ್ ಕುಮಾರ್, “ಗೋಳೂರು ಹಾಡಿ ಸೇರಿದಂತೆ ಅನೇಕ ಹಾಡಿಗಳಲ್ಲಿ ಇದೇ ಸಮಸ್ಯೆ ಇದೆ. ಇದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಸ್ಥಳಕ್ಕೆ ಬಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತಿಲ್ಲ” ಎಂದು ಹೇಳಿದರು. ಪರಿಶಿಷ್ಟ ವರ್ಗಗಳ ಅಧಿಕಾರಿ ಮಲ್ಲೇಶ್ ಮಾತನಾಡಿ, “ತಾಲೂಕಿನ ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ‌ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ರಾಜ್ಯದಲ್ಲಿ 88.06 ಲಕ್ಷ ಮನೆಗಳಿಗೆ ನಳಸಂಪರ್ಕ: ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಲಜೀವನ್ ಮಿಷನ್ 2.0 ಸಂಬಂಧಿಸಿದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ವಿಡಿಯೋ ಸಂವಾದದಲ್ಲಿ ಮಾತನಾಡಿದ್ದ ಸಿಎಂ, ಕರ್ನಾಟಕದ ಹಲವು ಭಾಗಗಳ ನೀರಿನಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಮಿಶ್ರಣದ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಗಳಿಗೆ ಕುಡಿಯಲು ಯೋಗ್ಯ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಮೂಲಗಳ ಸುಧಾರಣೆ ಮತ್ತು ಬೃಹತ್ ನೀರಿನ ಸರಬರಾಜು ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!