
ಉದಯವಾಹಿನಿ, ಜಬಲ್ಪುರ(ಮ.ಪ್ರ): ಇಲ್ಲಿಯ ಬರ್ಗಿ ಜಲಾಶಯದಿಂದ ಶನಿವಾರ ಐದು ಮತ್ತು ಆರು ವರ್ಷ ಪ್ರಾಯದ ಇನ್ನೂ ಇಬ್ಬರು ಬಾಲಕರ ಶವಗಳನ್ನು ಹೊರತೆಗೆಯಲಾಗಿದ್ದು, ಗುರುವಾರ ಸಂಭವಿಸಿದ ಕ್ರೂಸ್ ಬೋಟ್ ದುರಂತದಲ್ಲಿ ಮೃತರ ಸಂಖ್ಯೆ 13 ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಪ್ರತಿಕೂಲ ಹವಾಮಾನದಿಂದಾಗಿ ಕ್ರೂಸ್ ಬೋಟ್ ಮಗುಚಿದ್ದು, ಶುಕ್ರವಾರ ನಾಲ್ಕರ ಹರೆಯದ ಮಗು ಮತ್ತು ಎಂಟು ಮಹಿಳೆಯರು ಸೇರಿದಂತೆ ಒಂಭತ್ತು ಶವಗಳು ಪತ್ತೆಯಾಗಿದ್ದವು.
ಶನಿವಾರ ಶವವಾಗಿ ಪತ್ತೆಯಾಗಿರುವ ಬಾಲಕರ ತಾಯಂದಿರ ಶವಗಳು ಈ ಮೊದಲೇ ಪತ್ತೆಯಾಗಿದ್ದವು. ಐದರ ಹರೆಯದ ಬಾಲಕನ ತಂದೆ ಮತ್ತು ಸೋದರ ಸಂಬಂಧಿ ಈಗಲೂ ನಾಪತ್ತೆಯಾಗಿದ್ದಾರೆ.
