ಉದಯವಾಹಿನಿ, ಚಂಡಿಗಡ: ಬಿಜೆಪಿಯ ರಾಜ್ಯಸಭಾ ಸಂಸದೆ ರೇಖಾ ಶರ್ಮಾ ಅವರು ಮಾಜಿ ಮುಖ್ಯಮಂತ್ರಿ ಭಜನಲಾಲ್ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಪಕ್ಷದ ಹರ್ಯಾಣ ಘಟಕದಲ್ಲಿ ಭಿನ್ನಮತ ರವಿವಾರ ಇನ್ನಷ್ಟು ತೀವ್ರಗೊಂಡಿದೆ. ಹಿರಿಯ ಬಿಜೆಪಿ ನಾಯಕ ಕುಲದೀಪ್ ಬಿಷ್ಟೋಯಿ ಅವರು ಶರ್ಮಾ ತಕ್ಷಣ ಕ್ಷಮೆ ಕೇಳದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಂಚಕುಲಾದಲ್ಲಿ ಚುನಾವಣಾ ಸಭೆಯಲ್ಲಿ ಶರ್ಮಾರ ಹೇಳಿಕೆಗಳ ಒಂದು ವಾರದ ಬಳಿಕ ಮೌನ ಮುರಿದಿರುವ ಬಿಷ್ಟೋಯಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ‘ಅಹಂಕಾರ’ ಮತ್ತು ‘ಹಿರಿಯ ನಾಯಕರಿಗೆ ಅಗೌರವದ’ ವಿರುದ್ಧ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಿಷ್ಟೋಯಿ ಭಜನಲಾಲ್ ಅವರ ಪುತ್ರರಾಗಿದ್ದು, 2022ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
‘2014ರಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಬಾರಿ ಗೆದ್ದಿದ್ದು,ಎರಡರಲ್ಲಿ ನನ್ನ ಕೊಡುಗೆಯಿದೆ. ನನ್ನ ಹಾಗೂ ನನ್ನ ಪಕ್ಷದ ಮೈತ್ರಿಯಿಂದಾಗಲೇ ಬಿಜೆಪಿಗೆ ಮೊದಲ ಬಾರಿಗೆ ಹರ್ಯಾಣದಲ್ಲಿ ಸರಕಾರ ರಚಿಸಲು ಸಾಧ್ಯವಾಗಿತ್ತು. ಅಲ್ಲದೆ 2024ರಲ್ಲಿಯೂ ಭಜನಲಾಲ್ ಅವರಿಗೆ ನಿಷ್ಠವಾಗಿದ್ದ ಶೇ.7ಕ್ಕೂ ಅಧಿಕ ಮತಗಳು ಬಿಜೆಪಿಗೆ ಬೀಳುವಂತೆಯೂ ಮಾಡಿದ್ದೆ ‘ ಎಂದು ಬಿಷ್ಟೋಯಿ ವೀಡಿಯೊದಲ್ಲಿ ಹೇಳಿದ್ದಾರೆ.
‘ಹಿರಿಯ ನಾಯಕರಿಗೆ ಅಗೌರವ ತೋರಿಸಿದರೆ ಜನರು ಅದನ್ನು ಮರೆಯುವುದಿಲ್ಲ. ಅವರು ಮರೆಯಲು ನಾವು ಬಿಡುವುದೂ ಇಲ್ಲ. ನಿಮ್ಮನ್ನು ಸಂಪೂರ್ಣವಾಗಿ ನಾಶಗೊಳಿಸುವ ಯಾವುದೇ ಹೆಜ್ಜೆಯನ್ನು ಇರಿಸುವುದನ್ನು ನನಗೆ ಅನಿವಾರ್ಯವಾಗಿಸಬೇಡಿ ‘ ಎಂದು ಹೇಳಿರುವ ಮಾಜಿ ಲೋಕಸಭಾ ಸಂಸದರೂ ಆಗರುವ ಬಿಷ್ಟೋಯಿ ‘ನಾನು ಬಿಜೆಪಿಯ ಶಿಸ್ತಿನ ಯೋಧನಾಗಿದ್ದೇನೆ,ಇಲ್ಲದಿದ್ದರೆ ನಾನು ಈಗಾಗಲೇ ಕ್ರಮ ತೆಗೆದುಕೊಳ್ಳುತ್ತಿದ್ದೆ’ ಎಂದಿದ್ದಾರೆ.
