ಉದಯವಾಹಿನಿ, ವೆಸ್ಟ್ ಪಾಮ್ ಬೀಚ್(ಯುಎಸ್‌ಎ): ಇರಾನ್ ಸಲ್ಲಿಸಿರುವ ಹೊಸ ಶಾಂತಿ ಪ್ರಸ್ತಾಪವನ್ನು ಪರಿಶೀಲಿಸುತ್ತೇವೆ. ಆದರೆ, ಅದನ್ನು ಸ್ವೀಕರಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಹೇಳಿದರು. ಇದಕ್ಕೂ ಮುನ್ನ, ಇರಾನ್-ಅಮೆರಿಕ ನಡುವೆ ಹೊಸ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಟೆಹ್ರಾನ್ 14 ಅಂಶಗಳ ಪ್ರಸ್ತಾವನೆ ಸಲ್ಲಿಸಿದೆ ಎಂದು ಇರಾನ್‌ನ ತಸ್ನಿಮ್ ಮತ್ತು ಫಾರ್ಸ್ ಸುದ್ದಿ ಸಂಸ್ಥೆಗಳು ವರದಿ ಮಾಡಿದ ನಂತರ ಟ್ರಂಪ್ ಹೇಳಿಕೆ ಹೊರಬಂದಿದೆ.ಎಲ್ಲಾ ರಂಗಗಳಲ್ಲಿ ಸಂಘರ್ಷವನ್ನು ಕೊನೆಗೊಳಿಸುವುದು ಮತ್ತು ನಿರ್ಣಾಯಕ ಹಾರ್ಮುಜ್ ಜಲಸಂಧಿಗೆ ಹೊಸ ಚೌಕಟ್ಟನ್ನು ಜಾರಿಗೆ ತರುವ ವಿವರಗಳು ಈ ಪ್ರಸ್ತಾವನೆಯಲ್ಲಿವೆ ಎಂದು ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿತ್ತು.”ಇರಾನ್ ನಮಗೆ ಕಳುಹಿಸಿರುವ ಪ್ರಸ್ತಾವನೆಯನ್ನು ನಾನು ಶೀಘ್ರದಲ್ಲೇ ಪರಿಶೀಲನೆ ಮಾಡುತ್ತೇವೆ. ಆದರೆ, ಕಳೆದ 47 ವರ್ಷಗಳಲ್ಲಿ ಅವರು ಮಾನವೀಯತೆ ಮತ್ತು ಜಗತ್ತಿಗೆ ಏನನ್ನು ಮಾಡಿದ್ದಾರೋ ಅದಕ್ಕೆ ಸಾಕಷ್ಟು ದೊಡ್ಡ ಬೆಲೆಯನ್ನು ಇನ್ನೂ ಪಾವತಿಸಿಲ್ಲ. ಆದ್ದರಿಂದ ಅದು ಸ್ವೀಕಾರಾರ್ಹವಾಗಿರುತ್ತದೆ ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ” ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ವರದಿಗಾರರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ಅವರು (ಇರಾನ್) ತಪ್ಪಾಗಿ ವರ್ತಿಸಿದರೆ, ಏನಾದರೂ ಕೆಟ್ಟದ್ದನ್ನು ಮಾಡಿದರೆ, ಅದನ್ನು ನೋಡೋಣ” ಎನ್ನುತ್ತಾ, “ಅದು ಸಂಭವಿಸುವ ಸಾಧ್ಯತೆ ಖಂಡಿತಾ ಇದೆ” ಎಂದಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಆರಂಭಿಸಿದ್ದ ಯುದ್ಧ ಏಪ್ರಿಲ್ 8ರಿಂದ ಸ್ಥಗಿತಗೊಂಡಿದ್ದು, ಪಾಕಿಸ್ತಾನದಲ್ಲಿ ನಡೆದ ಒಂದು ಸುತ್ತಿನ ಶಾಂತಿ ಮಾತುಕತೆ ವಿಫಲವಾಗಿದೆ.
ಇರಾನ್ ಮಿಲಿಟರಿಯ ಕೇಂದ್ರ ಕಮಾಂಡ್‌ನ ಹಿರಿಯ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಅವರು, “ಇರಾನ್ ಮತ್ತು ಅಮೆರಿಕ ನಡುವೆ ಹೊಸ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ” ಎಂದು ಶನಿವಾರ ಹೇಳಿದ್ದಾರೆ.”ಯುನೈಟೆಡ್ ಸ್ಟೇಟ್ಸ್ ಯಾವುದೇ ಭರವಸೆಗಳು ಅಥವಾ ಒಪ್ಪಂದಗಳಿಗೆ ಬದ್ಧವಾಗಿಲ್ಲ ಎಂದು ಪುರಾವೆಗಳು ತೋರಿಸಿವೆ” ಎಂದು ಅವರು ತಿಳಿಸಿರುವುದಾಗಿ ಫಾರ್ಸ್ ಸುದ್ದಿ ಸಂಸ್ಥೆಯ ವರದಿ ಉಲ್ಲೇಖಿಸಿದೆ.”ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡುವುದು ಅಥವಾ ಮುಖಾಮುಖಿ ವಿಧಾನವನ್ನು ಮುಂದುವರಿಸುವುದು ಅಮೆರಿಕದ ಅಂಗಳದಲ್ಲಿದೆ. ಇರಾನ್ ಎರಡೂ ಮಾರ್ಗಗಳಿಗೂ ಸಿದ್ಧ” ಎಂದು ಟೆಹ್ರಾನ್‌ನಲ್ಲಿ ರಾಜತಾಂತ್ರಿಕರ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!