ಉದಯವಾಹಿನಿ, ತನ್ನದೇ ಕುಟುಂಬಕ್ಕೆ ಸೇರಿದ ಹೊಲದಿಂದ ಕಲ್ಲಂಗಡಿ ಹಣ್ಣು ಕಿತ್ತ ಆರೋಪದಲ್ಲಿ 13 ವರ್ಷದ ಬಾಲಕನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಘಟನೆ ಬಸಾಯಿ ಜಾಗ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಿ ಖೇಡಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಹೊಲವನ್ನು ಬಾಲಕನ ಕುಟುಂಬ ಅವರ ಪಾಲುದಾರರಿಗೆ ಗೇಣಿಗೆ ನೀಡಿತ್ತು. ಕಲ್ಲಂಗಡಿ ಹಣ್ಣು ಕಿತ್ತಿರುವುದಕ್ಕೆ ಅವರೇ ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿಗಳಾದ ರಿಯಾಝುದ್ದೀನ್ ಹಾಗೂ ಶಿರಾಝುದ್ದೀನ್‌ನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಆಗ್ರಾ ಡಿಸಿಪಿ (ಪಶ್ಚಿಮ) ಆದಿತ್ಯ ತಿಳಿಸಿದ್ದಾರೆ. ಬಾಲಕನ ಕುಟುಂಬದ ಮಾಲಕತ್ವದ ಭೂಮಿಯಲ್ಲಿ ಆರೋಪಿಗಳು ಕೃಷಿ ಮಾಡುತ್ತಿದ್ದರು ಹಾಗೂ ಕುಟುಂಬದೊಂದಿಗೆ ಪಾಲುದಾರರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
