ಉದಯವಾಹಿನಿ, ಬೆಂಗಳೂರು : ಬಾಗಲಕೋಟೆ ಕ್ಷೇತ್ರದ ಸೋಲನ್ನು ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್​ ಉಪಸಮರ ಗೆದ್ದಿದೆ ಎಂದರೆ ಸರ್ಕಾರದ ಪರವಾದ ಒಲವು ಇದೆ ಅನ್ನುವುದು ಸರಿಯಲ್ಲ. ಮುಂದೆ ಸಂಘಟನೆಗೆ ಬಲ ತುಂಬಬೇಕು. ಇನ್ನಷ್ಟು ಒಗ್ಗಟ್ಟಿನಿಂದ ಹೋಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದಾರೆ. ಬಾಗಲಕೋಟೆಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಈ ಬಾರಿ ಮತದಾರರು ನಮ್ಮ ಕೈಹಿಡಿಯುವ ವಿಶ್ವಾಸ ಇತ್ತು. ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದರು ಎಂದು ಹೇಳಿದರು.

ಇದಕ್ಕೂ ಮಿಗಿಲಾಗಿ ಮುಖ್ಯಮಂತ್ರಿಯವರು ಬಾಗಲಕೋಟೆಯಲ್ಲಿ ಬಂದು 15 ದಿನ ಬೀಡು ಬಿಟ್ಟಿದ್ದರು. ಸಚಿವ ಸಂಪುಟದ ಸದಸ್ಯರೂ ಬೀಡು ಬಿಟ್ಟಿದ್ದರು. ಆದರೂ ಗೆಲುವಿನ ವಿಶ್ವಾಸ ನಮಗಿತ್ತು. ಆದರೆ, ಬಾಗಲಕೋಟೆಯಲ್ಲಿ ನಮಗೆ ಹಿನ್ನಡೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದರು.

ಬಾಗಲಕೋಟೆಯಲ್ಲಿನ ಹಿನ್ನಡೆ ಕುರಿತು ನಾವು ಮುಖಂಡರ ಜೊತೆ ಕುಳಿತು ಚರ್ಚೆ ಮಾಡಬೇಕಾಗಿದೆ. ನಂತರ ನಮ್ಮ ಸಂಘಟಿತ ಕಾರ್ಯದ ಕುರಿತು ಕಾರ್ಯತಂತ್ರ ಮಾಡುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಯಾವುದೇ ಸಣ್ಣ ಒಡಕಿಲ್ಲದೇ, ಸ್ಥಳೀಯ ಮುಖಂಡರು ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು, ಪಕ್ಷದ ಅಭ್ಯರ್ಥಿ ಪರವಾಗಿ ಒಟ್ಟಾಗಿ, ಒಂದಾಗಿ, ಎಲ್ಲರೂ ಶ್ರಮ ಹಾಕಿದ್ದರು. ಪಕ್ಷದ ನಾಯಕರು ಸಂಘಟಿತರಾಗಿ ಶ್ರಮ ಹಾಕಿದರು. ನಾವು ಕೂಡ ಕೈಜೋಡಿಸಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

ಪಶ್ಚಿಮ ಬಂಗಾಳ, ಅಸ್ಸೋಂ, ಪುದುಚೇರಿಯಲ್ಲಿ ಬಿಜೆಪಿ ಗೆಲುವು ಒಂದು ಕಡೆ ನರೇಂದ್ರ ಮೋದಿಜೀ ಅವರ ನಾಯಕತ್ವಕ್ಕೆ ದೊಡ್ಡ ಶಕ್ತಿಯನ್ನು ತುಂಬಿದಂತಾಗಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್‍ ಜೀ ಅವರು ಅಧ್ಯಕ್ಷರಾದ ಮೇಲೆ ಮೊದಲ ಚುನಾವಣೆ ಇದಾಗಿದೆ. ಬಹುದೊಡ್ಡ ಸಂದೇಶವನ್ನು ನೀಡಿದೆ. ಇಡೀ ದೇಶದಲ್ಲಿ ಅಮಿತ್ ಶಾ ಜೀ ಅವರು ಚುನಾವಣಾ ಚಾಣಕ್ಯ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಅಮಿತ್ ಶಾ ಜೀ ಅವರ ತಂತ್ರಗಾರಿಕೆಯೂ ಈ ಗೆಲುವಿನ ಹಿಂದಿದೆ ಎಂದು ವಿವರಿಸಿದರು.

ಡಿಎಂಕೆ ತಮ್ಮ ಆಡಳಿತದಲ್ಲಿ ಹಿಂದೂಗಳಿಗೆ ಅಪಮಾನ‌ ಮಾಡುತ್ತಿದ್ದರು. ಸ್ಟಾಲಿನ್ ತಮಿಳುನಾಡಿನಲ್ಲಿ ಅಟ್ಟಹಾಸದಿಂದ, ಅಧಿಕಾರದ ಅಮಲಿನಿಂದ ಮೆರೆಯುತ್ತಿದ್ದರು‌. ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಡಿಎಂಕೆಯನ್ನು ಕಿತ್ತೊಗೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ಗೆಲುವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅಮಿತ್ ಶಾ ಅಂದರೆ ಚುನಾವಣಾ ಚಾಣಕ್ಯ ಅಂತಾರೆ. ಅವರ ತಂತ್ರಗಾರಿಕೆನೂ ಕೂಡ ಬಿಜೆಪಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದಿದೆ. ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರದ ದರ್ಪ, ಮದದಲ್ಲಿ ಇದ್ದರು. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಕನಸಿನಲ್ಲಿ ಇದ್ದರು. ಆ ಕನಸು ನುಚ್ಚು ನೂರಾಗಿದೆ. ಮೊದಲ‌ ಬಾರಿಗೆ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ. ಇದರಿಂದ‌ ಪ್ರತಿ ಹಿಂದೂ ಸಂಭ್ರಮ ಮಾಡುತ್ತಿದ್ದಾರೆ. ಸಾವಿರಾರು ಬಿಜೆಪಿ ಕಾರ್ಯಕರ್ತರ ಬಲಿದಾನ ಆಗಿದೆ. ಪಶ್ಚಿಮ ಬಂಗಾಳದ ಗೆಲುವಿಗಾಗಿ ಅಲ್ಲಿನ ಕಾರ್ಯಕರ್ತರಿಗೆ ನಾವು ದೊಡ್ಡ ಸಲಾಂ ಹೇಳಬೇಕಿದೆ. ಅಲ್ಲಿ ಹಲವು ದಶಕಗಳಿಂದ ನಮ್ಮ ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ಆಗುತ್ತಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ ಎಂದರಲ್ಲದೇ 3 ರಾಜ್ಯಗಳ ಕಾರ್ಯಕರ್ತರಿಗೆ ವಂದನೆ, ಅಭಿನಂದನೆ ತಿಳಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!