ಉದಯವಾಹಿನಿ, ಕಾಂಗ್ರಾ(ನುರಪುರ್) : ಖಾಸಗಿ ಬಸ್​ ಚಾಲಕರೊಬ್ಬರಿಗೆ ಡ್ರೈವಿಂಗ್​ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದ ಪರಿಣಾಮ ಬಸ್​ ರಸ್ತೆಯಲ್ಲೇ ಮಗುಚಿ ಬಿದ್ದಿರುವ ಘಟನೆ ನಡೆದಿದೆ. ಛಂಬಾದಿಂದ ಉನಾ ಮಾರ್ಗದಲ್ಲಿ ಚಲಿಸುತ್ತಿದ್ದ ವೇಳೆ ನುರಪುರ್​ ಬಳಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಚಾಲಕನಿಗೆ ಹೃದಯಾಘಾತ ಸಂಭವಿಸುತ್ತಿದ್ದಂತೆ ಆತ ಬಸ್​ ಮೇಲಿನ ನಿಯಂತ್ರಣ ಕಳೆದುಕೊಂಡರು. ಹೀಗಾಗಿ ಬಸ್ ರಸ್ತೆ ಮಧ್ಯೆದಲ್ಲೇ ಮಗುಚಿಬಿದ್ದಿದೆ. ಇದರಿಂದ ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಒಂದೇ ಬಾರಿಗೆ ಆಘಾತ ಎನಿಸಿತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ನುರ್​ಪುರ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಛಂಬಾದಿಂದ ಉನಾದತ್ತ ನುರ್​ಪುರ್​ ಮಾರ್ಗವಾಗಿ ತೆರಳುತ್ತಿದ್ದ ನುರ್​ಪುರ್​ದ ಘಟ್ಟದ ಪ್ರದೇಶದಲ್ಲಿ ಬಸ್​ ಬೆಳಗ್ಗೆ 6:30ಕ್ಕೆ ಉರುಳಿಬಿದ್ದಿದೆ. ಬೆಟ್ಟದಿಂದ ಕೆಳಗ್ಗೆ ಉರುಳಿದ್ದರೆ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್​ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದರು.ಬಸ್​ನಲ್ಲಿ 20 ಜನ ಪ್ರಯಾಣಿಕರಿದ್ದರು. ಅದು​ ಉರುಳಿಬಿದ್ದ ಪರಿಣಾಮ ಗಾಯಗೊಂಡು ಚಿರಾಡುತ್ತಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿ ತಕ್ಷಣಕ್ಕೆ ಬೇರೆ ವಾಹನಗಳಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು. ಅವರೆಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಹೃದಯಾಘಾತಕ್ಕೊಳಗಾದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಂಡಿದ್ದಾರೆ. ಗಾಯಗೊಂಡಿರುವ ಇತರೆ ಪ್ರಯಾಣಿಕರನ್ನು ಛಂಬಾದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಂಡಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ರಸ್ತೆ ಮಧ್ಯೆದಲ್ಲೇ ಬಿದ್ದಿದ್ದರಿಂದ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಯಿತು. ನುರ್​ಪುರ್​ ಪೊಲೀಸರು ತಕ್ಷಣಕ್ಕೆ ಮಾರ್ಗ ಬದಲಾವಣೆ ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ​ಪೊಲೀಸರಿಂದ ತನಿಖೆ: ಈ ಕುರಿತು ಮಾತನಾಡಿರುವ ನುರ್​ಪುರ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲಭೂಷಣ್​ ವರ್ಮಾ, ಬಸ್​ ಉರುಳಿಬಿದ್ದಿರುವ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಇದಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!