ಉದಯವಾಹಿನಿ, ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆದಿದೆ. ಕೊಲ್ಲಂ ಜಿಲ್ಲೆಯ ಚಾತನೂರು ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಕುಮಾರ್ ಅವರು ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಮಧ್ಯೆ ಸ್ಪರ್ಧೆ ಇತ್ತು. ಆದರೆ ಅಂತಿಮವಾಗಿ 3,686 ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಬಿ.ಬಿ. ಗೋಪಕುಮಾರ್ ಅವರು 46,567 ಮತಗಳನ್ನು ಪಡೆದರೆ ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಅವರು 42,881 ಮತಗಳನ್ನು ಪಡೆದರು.
ಚಾತನೂರು 2006 ರಿಂದ ಸಿಪಿಐನ ಭದ್ರಕೋಟೆಯಾಗಿತ್ತು. ಈ ಕೋಟೆಯನ್ನು ಈ ಬಾರಿ ಗೋಪಕುಮಾರ್ ಬೇಧಿಸಿದ್ದಾರೆ.2021 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸಿಪಿಐನ ಜಯಲಾಲ್ ಅವರು 17,206 ಮತಗಳ ಅಂತರಿಂದ ಜಯಗಳಿಸಿದ್ದರು. ಜಯಲಾಲ್ ಅವರಿಗೆ 59,296 ಮತಗಳು ಬಿದ್ದರೆ ಬಿಬಿ ಗೋಪಕುಮಾರ್ ಅವರಿಗೆ 42,090 ಮತಗಳು ಬಿದ್ದಿದ್ದವು. 2016 ರಿಂದ ಗೋಪಕುಮಾರ್ ಅವರು ಸ್ಪರ್ಧಿಸುತ್ತಿದ್ದು ಈ ಬಾರಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ತಳಮಟ್ಟದಿಂದ ಬಹಳ ಪ್ರಯತ್ನ ನಡೆಸುತ್ತಿದೆ. 2016ರಲ್ಲಿ ಓ. ರಾಜಗೋಪಾಲ್ ಅವರು ನೇಮಮ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಪ್ರವೇಶಿಸಿತ್ತು. ಆದರೆ 2021ರ ಚುನಾವಣೆಯಲ್ಲಿ ಪಕ್ಷವು ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ತ್ರಿಶೂರ್‌ನಿಂದ ಗೆಲ್ಲುವ ಮೂಲಕ ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ಸೃಷ್ಟಿಸಿದ್ದರು.
ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 101 ವಾರ್ಡ್‌ಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಏರಿತ್ತು.
