
ಉದಯವಾಹಿನಿ, ಕೋಲ್ಕತ್ತಾ (ಪಶ್ಚಿಮಬಂಗಾಳ): ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷವನ್ನು (ಟಿಎಂಸಿ) ಬಲವಂತವಾಗಿ ಸೋಲಿಸಲಾಗಿದೆ. ಇದು ಬಿಜೆಪಿಯ ನಿಜವಾದ ಗೆಲುವಲ್ಲ. ಅಕ್ರಮ, ಅನೈತಿಕವಾಗಿ ಚುನಾವಣೆ ನಡೆಸಲಾಗಿದೆ. ನಾನು ಭವಾನಿಪುರದಲ್ಲಿ ಗೆದ್ದಿದ್ದರೂ ಸೋಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಿಜವಾಗಿಯೂ ಗೆದ್ದಿದ್ದರೆ, ಯಾವುದೇ ತಕರಾರು ಇರಲಿಲ್ಲ. ಸೋಲು- ಗೆಲುವು ಚುನಾವಣೆಗಳ ಭಾಗ. ನಿಯಮಾನುಸಾರ ಗೆಲ್ಲದ ಕಾರಣ, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಮ್ಮ ಪಕ್ಷವು ಒಗ್ಗಟ್ಟಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನನಗೆ ಕುರ್ಚಿಯಲ್ಲ, ಜನರು ಮುಖ್ಯ: ಭವಾನಿಪುರದಲ್ಲಿ ಸೋತಿದ್ದು ವಿಧಾನಸಭೆ ಪ್ರವೇಶಿಸಲು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವಿಧಾನಸಭೆಗೆ ಹೋಗುವುದಿಲ್ಲ. ನನ್ನನ್ನು ಬಲವಂತವಾಗಿ ಸೋಲಿಸಲಾಗಿದೆ. ನನಗೆ ಕುರ್ಚಿಯ ಬಗ್ಗೆ ಕಾಳಜಿ ಇಲ್ಲ. ಜನರ ಬಗ್ಗೆ ಕಾಳಜಿ ಇದೆ. ನಾನು ಈಗ ಸ್ವತಂತ್ರಳಾಗಿದ್ದೇನೆ. ಬೀದಿಯಲ್ಲಿದ್ದೇನೆ, ಇಲ್ಲಿಯೇ ಇರುತ್ತೇನೆ ಎಂದು ಹೇಳಿದರು.ಪಕ್ಷದ ಕಚೇರಿಗಳ ಮೇಲೆ ದಾಳಿ ಖಂಡನೀಯ: ಇನ್ನು, ತಮ್ಮ ಪಕ್ಷದ ಕಚೇರಿಗಳ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದರು. ಬಿಜೆಪಿ ಕಾರ್ಯಕರ್ತರು ನಮ್ಮ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಕಚೇರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪಕ್ಷದ ಮುಖ್ಯ ಕಚೇರಿಯನ್ನು ಆಕ್ರಮಿಸಲು ಪ್ರಯತ್ನ ನಡೆದಿದೆ. ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.ಟಿಎಂಸಿ ಕಾರ್ಯಕರ್ತರನ್ನು ಬಿಜೆಪಿಗೆ ಸೇರಲು ಆಮಿಷವೊಡ್ಡಲಾಗುತ್ತಿದೆ. ಅವರು ತಮ್ಮ ಸುರಕ್ಷತೆಗಾಗಿ ಹಾಗೆ ಮಾಡಬಹುದು. ಇಂದು ಅವರು ಪಕ್ಷದಿಂದ ಹೋಗಬಹುದು. ಆದರೆ ಭವಿಷ್ಯದಲ್ಲಿ ಅವರು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಲಿದ್ದಾರೆ ಎಂದು ಮಮತಾ ಹೇಳಿದರು. ನೂತನ ಸರ್ಕಾರ ರಚನೆಗೆ ಬಿಜೆಪಿ ಸಜ್ಜು: ಐತಿಹಾಸಿಕ ಜಯ ಸಾಧಿಸಿರುವ ಬಿಜೆಪಿ ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ದಿನಾಂಕ ನಿಗದಿ ಮಾಡಿ ಘೋಷಿಸಿದೆ. ಮೇ 9 ರಂದು ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮವಾಗಿದ್ದು ಅಂದೇ ಸರ್ಕಾರ ರಚನೆಯಾಗಲಿದೆ ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
