ಉದಯವಾಹಿನಿ, ವಿಜಯವಾಡ (ಆಂಧ್ರ ಪ್ರದೇಶ): ಒಂದೇ ಒಂದು ಸರ್ಕಾರಿ ಕೆಲಸ ಪಡೆಯಲು ಕಷ್ಟಪಡಬೇಕಾದ ಇಂದಿನ ಪೈಪೋಟಿ ದಿನಗಳಲ್ಲಿ ವಿಜಯವಾಡದ ಗಂಟೆ ಸುಜಿತಶ್ರೀ ಎಂಬ ಯುವತಿ ಏಕಕಾಲದಲ್ಲಿ 10 ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಅದು ಕೇವಲ 22ನೇ ವಯಸ್ಸಿನಲ್ಲಿ!. ತಂದೆ ಮೋಹನ್ ರಾವ್ ಖಾಸಗಿ ಉದ್ಯೋಗಿಯಾಗಿದ್ದರೆ, ತಾಯಿ ಕೃಷ್ಣವೇಣಿ ಮನೆಗೆಲಸ ಮಾಡುತ್ತಾರೆ.
ತಮ್ಮ ಈ ಸಾಧನೆಯ ಹಾದಿ ಕುರಿತು ಪ್ರತಿಕ್ರಿಯಿಸಿರುವ ಸುಜಿತಶ್ರೀ, ಶಿಸ್ತಿನ ತಯಾರಿ, ದೃಢ ಸಂಕಲ್ಪ, ನಿರಂತರ ಅಧ್ಯಯನವೇ ಇದಕ್ಕೆ ಕಾರಣ. ನಾವು ವಿಜಯವಾಡದವರು. ತಂದೆ ಖಾಸಗಿ ಉದ್ಯೋಗಿ. ತಾಯಿ ಗೃಹಿಣಿ. ನನಗೆ ಜಸ್ವಂತ್ ಎಂಬ ಓರ್ವ ಅಣ್ಣನಿದ್ದು, ವಿದೇಶದಲ್ಲಿ ಎಂಎಸ್ ಮಾಡುತ್ತಿದ್ದಾನೆ. ನಾನು ಸರ್ಕಾರಿ ಉದ್ದೋಗಿಯಾಗಬೇಕು ಎಂಬುದು ನನ್ನ ತಂದೆಯ ಕನಸು. ಅವರು ಯಾವಾಗಲೂ ಅದನ್ನೇ ಹೇಳುತ್ತಿದ್ದರು. ನಾವು ಉನ್ನತ ಹುದ್ದೆಗಳಲ್ಲಿರಲು ಅವರು ತುಂಬಾ ಕಷ್ಟ ಪಡಬೇಕಾಯಿತು. ಈಗಲೂ ದುಡಿಯುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಏನು ಬೇಕೋ ಅದನ್ನು ಮಾಡಿದ್ದಾರೆ. ಅದಕ್ಕಾಗಿಯೇ ನಾನು ಅವರ ಕನಸನ್ನು ನನಸಾಗಿಸಲು ನಿರ್ಧರಿಸಿದೆ. ನಾನು ಪಿವಿಪಿ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಿಂದ ನನ್ನ ಬಿ.ಟೆಕ್ ಪೂರ್ಣಗೊಳಿಸಿದೆ. ನನಗೆ ಕ್ಯಾಂಪಸ್ ಸಂದರ್ಶನಗಳಲ್ಲಿಯೂ ಕೆಲಸ ಸಿಕ್ಕಿತು. ಆದರೆ, ಸರ್ಕಾರಿ ಕೆಲಸ ಪಡೆಯಲು ನಾನು ಅದನ್ನು ತ್ಯಜಿಸಬೇಕಾಯಿತು.
ಅಪ್ಪನ ಆಸೆಯಂತೆ 2024ರಿಂದ ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರಾರಂಭಿಸಿದೆ. ತರಬೇತಿಗಾಗಿ ಸ್ಥಳೀಯ ಸಂಸ್ಥೆಯಲ್ಲಿ ಸೇರಿಕೊಂಡೆ. ನನ್ನಂತೆಯೇ ಅದೇ ಆಸೆಯನ್ನು ಹೊಂದಿದ್ದ ಅನೇಕ ಉದ್ಯೋಗಾಕಾಂಕ್ಷಿಗಳು ಅಲ್ಲಿ ಇದ್ದರು. ಆರಂಭದಲ್ಲಿ, ನಾನು ನನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂದು ಭಯ ಕಾಡುತ್ತಿತ್ತು. ಆದರೆ, ಪ್ರಯತ್ನಿಸದೇ, ದೃಢಸಂಕಲ್ಪದೊಂದಿಗೆ ಮುನ್ನುಗ್ಗಿದೆ. ಸೋಲಬಾರದು ಎಂಬ ಉದ್ದೇಶದಿಂದ ನಾನು ಕೋಚಿಂಗ್‌ಗೆ ಹಾಜರಾದೆ. ಸಂಸ್ಥೆಯಲ್ಲಿ 3 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಮನೆಗೆ ಬಂದ ನಂತರವೂ 4 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಕೋಚಿಂಗ್ ಸೆಂಟರ್ನ ಶಿಕ್ಷಕ ಕೊಮ್ಮೂರಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ನಾನು ಅಂಕಗಣಿತ, Reasoning ಮತ್ತು ಸಾಮಾನ್ಯ ಜ್ಞಾನವನ್ನು ಕರಗತ ಮಾಡಿಕೊಂಡೆ. ಪ್ರತಿಯೊಂದು ಪ್ರಶ್ನೆಗೆ ಶಾರ್ಟ್‌ಕಟ್ ಉತ್ತರಗಳನ್ನು ಬರೆಯುವುದು, ಸಮಯ ನಿರ್ವಹಣೆ, ಬಿಡಬೇಕಾದ ಪ್ರಶ್ನೆಗಳು ಮತ್ತು ಬರೆಯಬೇಕಾದ ಪ್ರಶ್ನೆಗಳು ಮುಂತಾದ ಕೆಲವು ತಂತ್ರಗಳನ್ನು ಕಲಿತುಕೊಂಡೆ. ಇದೆಲ್ಲದರ ಫಲಿತಾಂಶವೇ ನನಗೆ ಒಂದೇ ಬಾರಿಗೆ 10 ಉದ್ಯೋಗಗಳು ಸಿಗಲು ಸಾಧ್ಯವಾಯಿತು. ನಾನು ಇಂಡಿಯನ್ ಬ್ಯಾಂಕ್, ಐಡಿಬಿಐ, ಎಪಿಸಿಒಬಿ, ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳಲ್ಲಿ ಜೂನಿಯರ್ ಅಸಿಸ್ಟೆಂಟ್, ಅಪ್ರೆಂಟಿಸ್ ನಂತಹ ಹುದ್ದೆಗಳಿಗೆ ಆಯ್ಕೆಯಾದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಡೆಸಿದ ಪ್ರತಿಷ್ಠಿತ ಸಹಾಯಕ ಆಡಳಿತಾಧಿಕಾರಿ (ಎಎಒ) ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿರುವೆ. ಸದ್ಯ ಎಎಒ ಆಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ತಯಾರಿ ನಡೆಸುತ್ತಿದ್ದೇನೆ ಎಂದು ಸುಜಿತಶ್ರೀ ತಮ್ಮ ಸಾಧನಾ ಹಾದಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ನನ್ನ ಬಳಿ ಒಂದೇ ಒಂದು ಸಲಹೆ ಇದೆ. ನೀವು ಏನನ್ನಾದರೂ ಪ್ರೀತಿಸಿ ಕಲಿತರೆ, ಖಂಡಿತವಾಗಿಯೂ ಯಶಸ್ಸಿನ ದಡವನ್ನು ತಲುಪುತ್ತೀರಿ. ಉತ್ಸಾಹದಿಂದ ಕಲಿತರೆ, ಯಶಸ್ಸು ಹಿಂಬಾಲಿಸುತ್ತದೆ. ಕೆಲಸ ಪಡೆಯುವಲ್ಲಿ ಸ್ವಲ್ಪ ತಡವಾಗಬಹುದು, ಆದರೆ, ಪ್ರಯತ್ನವನ್ನು ಕೈಬಿಡಬೇಡಿ. ಪ್ರತಿದಿನ ಅಭ್ಯಾಸ ಮಾಡಿ, ಆಗ ಮಾತ್ರ ನಿಮಗೆ ಫಲಿತಾಂಶಗಳು ಸಿಗುತ್ತವೆ. ಕಠಿಣ ಪರಿಶ್ರಮ, ತಲುಪಬೇಕಾದ ಗುರಿ, ಸಾಧಕರಿಗೆ ಇರಬೇಕಾದ ಶಿಸ್ತು ಇದ್ದರೆ ಏನನ್ನಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಸುಜಿತಶ್ರೀ.
