ಉದಯವಾಹಿನಿ, ಜಮ್ಮು: ಆಪರೇಷನ್ ಸಿಂದೂರ್ ನಂತರ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನಿ ಪಡೆಗಳು ಶೆಲ್ ದಾಳಿ ನಡೆಸಿದಾಗ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು ಸ್ಥಳೀಯ ಬಿಜೆಪಿ ನಾಯಕ ಪರ್ದೀಪ್ ಶರ್ಮಾ. ಇವರು ಜಾಮಿಯಾ ಜಿಯಾ ಉಲ್ ಉಲೂಮ್​ನಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಪಾಕಿಸ್ತಾನಿ ಶೆಲ್ ದಾಳಿಯ ಕೇಂದ್ರಬಿಂದು ಈ ಶಿಕ್ಷಣ ಸಂಸ್ಥೆಯಾಗಿತ್ತು. ಇದರಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡರೆ, ಅದರ ಶಿಕ್ಷಕ ಖಾರಿ ಮುಹಮ್ಮದ್ ಇಕ್ಬಾಲ್ ಮೃತಪಟ್ಟಿದ್ದರು.ಗಡಿಯಾಚೆಗಿನ ಶೆಲ್ ದಾಳಿ ಕುರಿತು ಈಟಿವಿ ಭಾರತ್​ ಜೊತೆ ಮಾತನಾಡಿರುವ ಶರ್ಮಾ, 2025ರ ಮೇ 7ರಂದು ಕ್ಯಾಂಪಸ್ ಒಳಗೆ ಜೋರಾದ ಸ್ಫೋಟಗಳು ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಉಂಟುಮಾಡಿದ್ದವು. ಈ ಸಂದರ್ಭದಲ್ಲಿ ಅನೇಕರು ಗಾಯಗೊಂಡಿದ್ದರು ಎಂದು ಆ ದಿನದ ನೆನಪನ್ನು ಮಾಡಿಕೊಂಡರು.

ನಾನು ಮಧ್ಯರಾತ್ರಿ ಹೋಗುವ ಹೊತ್ತಿಗೆ ಶೆಲ್ ದಾಳಿ ಪ್ರಾರಂಭವಾಗಿತ್ತು. ಆಗಲೇ ಜಾಮಿಯಾ ಜಿಯಾ-ಉಲ್-ಉಲೂಮ್ ಮುಖ್ಯಸ್ಥ ಸಯೀದ್ ಅಹ್ಮದ್ ಹಬೀಬ್ ಅವರಿಂದ ಕರೆ ಬಂತು. ತಕ್ಷಣಕ್ಕೆ ಜಾಮಿಯಾ ತಲುಪಿದೆ. ಗಾಯಗೊಂಡ ಖಾರಿ ಇಕ್ಬಾಲ್ ಮತ್ತು ಕೆಲವು ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದೆವು. 45 ನಿಮಿಷಗಳಲ್ಲಿ ಖಾರಿ ಇಕ್ಬಾಲ್ ನನ್ನ ತೋಳುಗಳಲ್ಲಿ ಕೊನೆಯುಸಿರೆಳೆದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು ಎಂದರು.

ಖಾರಿ ಇಕ್ಬಾಲ್‌ ನನ್ನ ಕೈಯಲ್ಲೇ ಇಹಲೋಕ ತ್ಯಜಿಸಿದರು. ಅವರೊಟ್ಟಿಗೆ ಹಿಂದಿನ ಜನ್ಮದಿಂದ ನನಗೆ ಸಂಬಂಧವಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ ನಡೆದ ಘಟನೆಯ ನೋವುಗಳು ಇನ್ನು ಹಸಿರಾಗಿದ್ದು, ನಮ್ಮ ನೆನಪುಗಳಿಂದ ಅಳಿಸಲು ಸಾಧ್ಯವಿಲ್ಲ ಎಂದು ಭಾವುಕರಾದರು. ಎಲ್‌ಒಸಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೆಲ್‌ ದಾಳಿಗಳು ಈ ಹಿಂದೆ ನಡೆದ ಗಡಿಯಾಚೆಗಿನ ಚಕಮಕಿಗಳಿಗಿಂತ ಭಿನ್ನವಾಗಿದ್ದವು. ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನಿ ಪಡೆಗಳು ಪೂಂಚ್ ಪಟ್ಟಣದ ವಸತಿ ಪ್ರದೇಶಗಳ ಮೇಲೆ ಶೆಲ್‌ಗಳನ್ನು ಹಾರಿಸಿದ್ದು ಇದೇ ಮೊದಲಾಗಿತ್ತು. ಆ ಸಮಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಸುರಕ್ಷತೆಗೆ ಮನೆಯಲ್ಲಿಯೇ ಇರುವಂತೆ ನಾನು ಜನರಿಗೆ ತಿಳಿಸಿದೆ. ಆ ಸಂಕಷ್ಟ ಸಮಯದಲ್ಲಿ ಕೇವಲ ಒಂದು ಗಂಟೆ ಮಾತ್ರ ನಾನು ಮಲಗಿದ್ದೆ ಎಂಬುದನ್ನು ಈ ವೇಳೆ ಅವರು ಸ್ಮರಿಸಿದರು.

Leave a Reply

Your email address will not be published. Required fields are marked *

error: Content is protected !!