ಉದಯವಾಹಿನಿ, ತಿರುವನಂತಪುರಂ (ಕೇರಳಂ): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ನಂತರ ಯುಡಿಎಫ್​​ ಕೂಟದ ಮುಂದಾಳು ಕಾಂಗ್ರೆಸ್ ಪಕ್ಷವು ತನ್ನ ನಾಯಕನನ್ನು ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿದೆ. ಇಂದು ಬೆಳಗ್ಗೆಯಿಂದ ಶಾಸಕರು, ನಾಯಕರು ಮತ್ತು ಮಿತ್ರಪಕ್ಷಗಳ ಜೊತೆ ಸರಣಿ ಸಭೆಗಳು ನಡೆಯುತ್ತಿವೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಸರ್ಕಸ್ ಬಗ್ಗೆ​ ತಿರುವನಂತಪುರಂನಿಂದ ದೆಹಲಿವರೆಗೂ ಚರ್ಚೆಗಳು ಹಬ್ಬಿವೆ.
10 ವರ್ಷಗಳ ನಂತರ ಅಧಿಕಾರಕ್ಕೆ ಬಂದು ಸಂಭ್ರಮದಲ್ಲಿರುವ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸದ್ಯ ಕೆಪಿಸಿಸಿ ಪ್ರಧಾನ ಕಚೇರಿಯಾದ ಇಂದಿರಾ ಭವನದಲ್ಲಿ ಮುಂದಿನ ಸಿಎಂ ಆಯ್ಕೆಯ ಬ್ಯುಸಿಯಲ್ಲಿ ಮುಳುಗಿ ಹೋಗಿದೆ.

ಎಐಸಿಸಿ ನೇಮಿಸಿದ ಕೇಂದ್ರ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಿದರು. ಅದರಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡುವ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಿದರು. ನಂತರದಲ್ಲಿ, ಕೇಂದ್ರ ವೀಕ್ಷಕರು ಪ್ರತಿಯೊಬ್ಬ ಶಾಸಕರೊಂದಿಗೆ ಗೌಪ್ಯ ಚರ್ಚೆ ನಡೆಸಿದ್ದಾರೆ.ಮುಂಚೂಣಿಯಲ್ಲಿ ಸತೀಶನ್​ ಹೆಸರು: ಕಳೆದ 5 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿ ಹೋರಾಟ ನಡೆಸಿದ ವಿ.ಡಿ. ಸತೀಶನ್ ಅವರ ಹೆಸರು ಮುಂದಿನ ಸಿಎಂ ರೇಸ್​​ನಲ್ಲಿ ಮುಂಚೂಣಿಯಲ್ಲಿದೆ. ಅವರ ಬೆಂಬಲಿಗರು ಮತ್ತು ಮುಸ್ಲಿಂ ಲೀಗ್‌ನಂತಹ ಪ್ರಮುಖ ಮಿತ್ರಪಕ್ಷದ ಶಾಸಕರು ಈ ಜನಾದೇಶವು ಸತೀಶನ್​ ಅವರ ನಾಯಕತ್ವಕ್ಕೆ ಸಿಕ್ಕ ಜಯ ಎಂಬುದು ಅವರ ಅಭಿಮತವಾಗಿದೆ. ಇತ್ತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರಭಾವವೂ ಕಮ್ಮಿ ಇಲ್ಲ. ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಜೊತೆಗಿನ ನಂಟು, ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಅವರ ಬಹಿರಂಗ ಬೆಂಬಲವೂ ಅವರಿಗಿದೆ. ಪಕ್ಷದ ಇನ್ನೊಬ್ಬ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಅನುಯಾಯಿಗಳು ಕೂಡ ಸಿಎಂ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!