ಉದಯವಾಹಿನಿ, ಬೆಂಗಳೂ
ರು: ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ಟ್ರಾಮಾ ಮತ್ತು ಎಮೆರ್ಜೆನ್ಸಿ ಕೇರ್ ವಿಭಾಗ ಕಡಿಮೆ ಅವಧಿಯಲ್ಲಿಯೇ ಅಂಗಾಂಗ ದಾನದ ಬಗ್ಗೆ ಅಭಿಯಾನ ಮೂಡಿಸಿ ನೂರಾರು ಜೀವಗಳನ್ನು ಉಳಿಸಿ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಧೀನ ಆಸ್ಪತ್ರೆಯಲ್ಲಿ ಒಂದಾದ ಟ್ರಾಮಾ ಮತ್ತು ಎಮೆರ್ಜೆನ್ಸಿ ಕೇರ್ ವಿಭಾಗವು ಅಂಗಾಂಗ ದಾನ ಅಭಿಯಾನದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಕೇಂದ್ರಕ್ಕೇರಿದೆ.
ಸುಸರ್ಜಿತ ವೈದ್ಯಕೀಯ ಸೌಲಭ್ಯಗಳಿರುವ ಈ ಕೇಂದ್ರದಲ್ಲಿ ೧೨೫ ರಿಂದ ೧೫೦ ಪ್ರಾಣಾಪಾಯದ ಅಂಚಿನಲ್ಲಿದ್ದ ರೋಗಿಗಳಿಗೆ ಸಜೀವ ಅಂಗಗಳನ್ನು ಕಸಿ ಮಾಡಿ ಪುನರ್ ಜನ್ಮ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ಅದರಲ್ಲೂ ಅಪಘಾತಗಳಲ್ಲಿ ತೀವ್ರ ಗಾಯಗಳಾದವರಿಗೆ ಮೆದುಳು ನಿಷ್ಕ್ರಿಯಗೊಂಡವರಿಗೆ ದಿನದ ೨೪ ಗಂಟೆಗಳ ಕಾಲವೂ ಸೇವೆ ನೀಡಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್.ಎಸ್, ಪ್ರಪಥಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ತಿಳುವಳಿಕೆ ಅಂಗಗಳ ಮರು ಪಡೆವ ಕೇಂದ್ರ ಇದಾಗಿದ್ದು, ಭಾರತದಲ್ಲಿಯೇ ಇಂತಹ ಕೇಂದ್ರ ಎರಡನೇಯದಾಗಿದೆ. ಅಷ್ಟೇ ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಡರೋಗಿಗಳಿಗೆ ಅಂಗಾಂಗ ಕಸಿ ಮಾಡಲಾಗಿದೆ.
