ಉದಯವಾಹಿನಿ, ಹಾಸನ: ತಮಿಳುನಾಡಿನ ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ಇದೆ. ಆದರೆ, ವಿಜಯ್‌ ಉಚಿತ ಗ್ಯಾರಂಟಿಗಳನ್ನು ನೀಡಲು 6 ರಿಂದ 7 ಲಕ್ಷ ಕೋಟಿ ಬೇಕು. ಅದ್ಯಾವ ರೀತಿ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಹಾಸನದ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ 50 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ದಾರೆ. ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎಂಬ ನನ್ನ ನಿರೀಕ್ಷೆ ನಿಜವಾಗಿದೆ ಎಂದು ಹೇಳಿದರು.

ತಮಿಳುನಾಡಿನ ಜನತೆಯ ಆಯ್ಕೆ ಕುರಿತು ಮಾತನಾಡಿದ ಅವರು, ತಮಿಳುನಾಡಿದ ರಾಜಕಾರಣದ ಬಗ್ಗೆ ಮೊದಲಿನಿಂದಲೂ ಎಲ್ಲರಿಗೂ ಗೊತ್ತಿದೆ. ಅಲ್ಲಿನ ಜನ ಸ್ವಲ್ಪ ಸಿನಿಮಾ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಾಗಿ ಹೊಸ ವ್ಯಕ್ತಿಗೆ ಅಧಿಕಾರ ನೀಡಲು ಜನ ಬಯಸಿದ್ದಾರೆ. ಮಾಧ್ಯಮಗಳು ಡಿಎಂಕೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ವಿಜಯ್ ಅವರ ಈ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ನಾನು ಟೀಕೆ ಮಾಡ್ಬೇಕಾ? ನಾನು ಚರ್ಚೆ ಮಾಡುವುದು ಅನವಶ್ಯಕ. ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ ರೀತಿ ಸರ್ಕಾರಗಳನ್ನ ಅಸ್ಥಿರಗೊಳಿಸಿದ್ದಾರೆ ಎಂಬುವುದು ತಿಳಿದಿದೆ. ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್‌ವರೆಗೆ. ಅಷ್ಟೇ ಅಲ್ಲ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನ ಕೊಟ್ಟು ಸರ್ಕಾರ ತೆಗೆದರು ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಕಾಲ ಅದಕ್ಕೆ ಉತ್ತರ ಕೊಡುತ್ತೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!