ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಸೃಷ್ಟಿಯಾಗಿದೆ. ಮಮತಾ ಬ್ಯಾನರ್ಜಿಅವರ ಭದ್ರಕೋಟೆಯನ್ನು ಸತತವಾಗಿ ಭೇದಿಸುತ್ತಾ ಬಂದ ‘ಜೈಂಟ್ ಕಿಲ್ಲರ್’ ಖ್ಯಾತಿಯ ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿದ ಬೆನ್ನಲ್ಲೇ, ಇಂದು (ಮೇ 8) ಕೋಲ್ಕತ್ತಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುವೇಂದು ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.

ಸುವೇಂದು ಅಧಿಕಾರಿ ಅವರಿಗೆ ಈ ಪಟ್ಟ ಸಿಗಲು ಅವರು ಸಾಧಿಸಿದ ಅಸಾಧಾರಣ ಗೆಲುವುಗಳೇ ಕಾರಣ. ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ದೇಶದ ಗಮನ ಸೆಳೆದಿದ್ದರೆ ಈ ಬಾರಿ ಮಮತಾ ಅವರ ಸ್ವಕ್ಷೇತ್ರವಾದ ಭವಾನಿಪುರದಲ್ಲಿಯೇ ಅವರನ್ನು ಎರಡನೇ ಬಾರಿಗೆ ಮಣ್ಣುಮುಕ್ಕಿಸುವ ಮೂಲಕ ಸುವೇಂದು ತಮ್ಮ ‘ಜೈಂಟ್ ಕಿಲ್ಲರ್’ ಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ನಾಳೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಪಕ್ಷದ ಸಂಘಟನೆ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲು ಹೈಕಮಾಂಡ್ ನಿರ್ಧರಿಸಿದೆ.ಹಿರಿಯ ನಾಯಕಿ ಮತ್ತು ನಟಿ ರೂಪಾ ಗಂಗೂಲಿ ಅವರ ಹೆಸರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ದೃಢಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!