ಉದಯವಾಹಿನಿ, ಚೆನ್ನೈ: ಚುನಾವಣಾ ಫಲಿತಾಂಶದ ಬಳಿಕ ಯಾವ ಪಕ್ಷ ಸರ್ಕಾರವನ್ನ ರಚಿಸುತ್ತೇವೆ ಎಂದು ಮುಂದೆ ಬರುತ್ತದೆಯೋ ಅವರು ಬಹುಮತ ಇದೆ ಎನ್ನುವುದನ್ನು ನನಗೆ ಮನವರಿಕೆ ಮಾಡಬೇಕು. ಈಗಲೂ ಇದಕ್ಕಿಂತ ಹೆಚ್ಚು ನಾನು ಏನು ಕೇಳಿಲ್ಲ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಪಕ್ಷ ಸರ್ಕಾರ ರಚಿಸಲು ಬಂದಾಗ ಅವರು ಬಹುಮತ ಇರುವ ಬಗ್ಗೆ ಖಾತರಿಪಡಿಸಬೇಕು. ನಾನು ತಲೆ ಎಣಿಕೆಯನ್ನು ಕೇಳುತ್ತಿಲ್ಲ. ಅದು ನನ್ನ ಅಧಿಕಾರ ಅಲ್ಲ. ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಲಿ ಎಂದರು.
ಬಹುಮತದ ಜೊತೆಗೆ ಯಾರೇ ಬಂದರೂ ಅವರಿಗೆ ಅವಕಾಶ ನೀಡಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಭಾಗ. ಅದರಲ್ಲಿ ಯಾವುದೇ ತಪ್ಪಿಲ್ಲ. ಅಂತಿಮವಾಗಿ ಸಂಖ್ಯೆ ಮುಖ್ಯ. ಸಂಖ್ಯೆಗಳಿದ್ದರೆ ನಾನು ನಾಳೆಯೇ ಪ್ರಮಾಣ ವಚನ ಬೋಧಿಸಲು ಸಿದ್ಧವಿದ್ದೇನೆ. 118 ಸಂಖ್ಯೆಯೊಂದಿಗೆ ಟಿವಿಕೆ ಹೊರತಾಗಿ ಯಾರೂ ಬರದಿದ್ದರೆ ಏನು ಮಾಡಬಹುದು ಯೋಚಿಸಬೇಕು. ಸಂವಿಧಾನದ ಆಯ್ಕೆಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಎಸ್‌ಆರ್ ಬೊಮ್ಮಾಯಿ ಪ್ರಕರಣ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ್ದಲ್ಲ. ಇದು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದೆ. ಬಹುಮತಕ್ಕೆ ಬೇಕಾದ ಸಂಖ್ಯೆ ಕೇಳುತ್ತಿದ್ದೇನೆ. ನನ್ನ ಮುಂದೆ ತಲೆ ಎಣಿಕೆ ಮಾಡಲು ನಾನು ಹೇಳುತ್ತಿಲ್ಲ. ಅದನ್ನು ವಿಧಾನಸಭೆಯಲ್ಲಿ ಮಾಡಲಿ. ಕುದುರೆ ವ್ಯಾಪರ ಆರಂಭವಾಗಿರುವುದು ಒಳ್ಳೆ ಬೆಳವಣಿಗೆಯಲ್ಲ. ನಾನು ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಸಿದ್ಧವಿದ್ದೇನೆ. ಆದರೆ ಬಹುಮತಕ್ಕೆ ಸಂಖ್ಯೆಯೂ ಬೇಕು ಎಂದು ಹೇಳಿದರು.
