ಉದಯವಾಹಿನಿ,ಹೈದರಾಬಾದ್: ಸರ್ಕಾರಿ ಶಾಲೆಗಾಗಿ 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಿದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯ ಕೆಡವಿದ್ದಕ್ಕೆ ಸಾರ್ವಜನಿಕರು, ಇತಿಹಾಸ ತಜ್ಞರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಖಾನಾಪುರ ಮಂಡಲದ ಅಶೋಕ್ ನಗರದಲ್ಲಿರುವ ಈ ದೇವಾಲಯ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ ಕಾಲದ್ದಾಗಿದೆ. ಈ ದೇವಾಲಯದಲ್ಲಿದ್ದ ಶಾಸನದಲ್ಲಿ ರಾಜನನ್ನು ʻಮಹಾರಾಜʼ ಮತ್ತು ʻರಾಜಾಧಿರಾಜುಲುʼ ಎಂದು ಸಂಬೋಧಿಸುವ ಅಪರೂಪದ ಏಳು ಸಾಲುಗಳ ತೆಲುಗು ಸಾಲುಗಳಿವೆ. 1965 ರಲ್ಲಿ ಪರಂಪರೆ ಇಲಾಖೆಯಿಂದ ದಾಖಲಿಸಲ್ಪಟ್ಟ ಈ ದೇವಾಲಯ ಪ್ರಾಚೀನ ಕೋಟೆಗಳಿಗೆ ಹೆಸರುವಾಸಿಯಾದ ಐತಿಹಾಸಿಕ ಕೋಟ ಕಟ್ಟ ಎಂಬ ಮಣ್ಣಿನ ಕೋಟೆ ಪ್ರದೇಶದೊಳಗೆ ಇತ್ತು. ಈ ಪರಂಪರೆಯ ತಾಣವನ್ನು ಸುಲಭವಾಗಿ ಸಂರಕ್ಷಿಸಬಹುದಿತ್ತು. ಇಲ್ಲವೇ ಸ್ಥಳಾಂತರಿಸಬಹುದಿತ್ತು ಎಂಬುದು ತಜ್ಞರು ವಾದವಾಗಿದೆ.
ದೇವಾಲಯ ಕೆಡವಿದ್ದಕ್ಕೆ ತೆಲಂಗಾಣದ ವಕೀಲ ರಾಮರಾವ್ ಇಮ್ಮನೇನಿ ಅವರು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಿದೆ. ರಾಜ್ಯ ಸರ್ಕಾರವು ಕಡ್ಡಾಯ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪುರಾತತ್ವ ಮತ್ತು ದತ್ತಿ ಇಲಾಖೆಯಿಂದ ಕಡ್ಡಾಯ ಅನುಮೋದನೆಗಳಿಲ್ಲದೆ ಕೆಲಸಕ್ಕೆ ಅನುಮತಿ ನೀಡಿದವರ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
