ಉದಯವಾಹಿನಿ, ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಂತ್ರ ಫಲಿತಾಂಶ ಬಂದಿದೆ. ಇದು ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳಿಗೆ ಕಾರಣವಾಗಿದೆ. ಇಂದು ದಿನವೆಲ್ಲ ಬಿರುಸಿನ ರಾಜಕೀಯ ವಾತಾವರಣ ಕಂಡು ಬಂತು. ಈ ನಡುವೆ ಸಂಜೆ ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಪಕ್ಷದ ಶಾಸಕರ ಸಭೆ ನಡೆಯಿತು. ಡಿಎಂಕೆ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 59 ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಚೆನ್ನೈನ ಅರಿವಾಲಯಂ ಸಂಕೀರ್ಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ , ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಎಐಎಡಿಎಂಕೆ ಜೊತೆಗಿನ ಮೈತ್ರಿಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು. ಸ್ಟಾಲಿನ್ ಅಂತಹ ಮೈತ್ರಿಯನ್ನು ರಚಿಸಲು ನಿರ್ಧರಿಸಿದರೆ, ಪಕ್ಷವು ಆ ನಿರ್ಧಾರವನ್ನು ಸ್ವೀಕರಿಸುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.

ಇದಲ್ಲದೇ, ಇಂದಿನ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಇಳಂಗೋವನ್ ಮಾಧ್ಯಮದೆದರು ಹೇಳಿದರು. ಇಂದು ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯ ಎಂದರೆ, ಡಿಎಂಕೆಗೆ ಮತ ಹಾಕಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ. ಇನ್ನೊಂದು ಮಹತ್ವದ ನಿರ್ಣಯ, ಸ್ಥಿರ ಸರ್ಕಾರವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸ್ಟಾಲಿನ್‌ಗೆ ಅಧಿಕಾರ ನೀಡುವುದಾಗಿದೆ. ಇನ್ನು ಕೋಮುವಾದಿ ಶಕ್ತಿಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂಬ ಪಕ್ಷದ ದೃಢ ನಿರ್ಧಾರವನ್ನು ಅವರು ಇದೇ ವೇಳೆ ದೃಢಪಡಿಸಿದರು.ಸರ್ಕಾರ ರಚಿಸಲು ಎಐಎಡಿಎಂಕೆ ತನ್ನ ಬಹುಮತವನ್ನು ಸಾಬೀತುಪಡಿಸುವಂತೆ ರಾಜ್ಯಪಾಲರು ಒತ್ತಾಯಿಸಿದ್ದಕ್ಕೆ ಡಿಎಂಕೆಯನ್ನು ಹೇಗೆ ಹೊಣೆಗಾರರನ್ನಾಗಿ ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಐಎಡಿಎಂಕೆ ಜೊತೆಗಿನ ಮೈತ್ರಿಯ ಬಗ್ಗೆ ಸ್ಟಾಲಿನ್ ಇನ್ನೂ ನಿರ್ಧರಿಸಿಲ್ಲ. ಆದರೆ, ಅವರು ಅಂತಹ ನಿರ್ಧಾರ ತೆಗೆದುಕೊಂಡರೆ ಪಕ್ಷವು ಅದನ್ನು ಸ್ವೀಕರಿಸುತ್ತದೆ ಎಂದು ಇಳಂಗೋವನ್ ಪುನರುಚ್ಚರಿಸಿದರು. ಸಭೆಯ ಮೊದಲು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಮತ್ತು ಅಗತ್ಯವೆಂದು ಪರಿಗಣಿಸಲಾದ ತುರ್ತು ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡುವ ನಿರ್ಣಯವನ್ನು ಡಿಎಂಕೆ ಶಾಸಕರು ಅಂಗೀಕರಿಸಿದರು.

Leave a Reply

Your email address will not be published. Required fields are marked *

error: Content is protected !!