ಉದಯವಾಹಿನಿ, ನಾಸಿಕ್(ಮಹಾರಾಷ್ಟ್ರ): ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)​ ಕಂಪನಿಯ ಶಾಖೆಯಲ್ಲಿ ಬಲವಂತದ ಮತಾಂತರ ಮತ್ತು ಕಿರುಕುಳ ನೀಡಿದ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಎಂಬಾಕೆಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಈಕೆಯನ್ನು ಛತ್ರಪತಿ ಸಂಭಾಜಿನಗರ್​ನಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ನಾಸಿಕ್​ ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ನಾಸಿಕ್​ ಟಿಸಿಎಸ್ ಶಾಖೆಯಲ್ಲಿ ಒಂದು ಕೋಮಿನ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ, ದೌರ್ಜನ್ಯ, ಬಲವಂತದ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಒಂಬತ್ತು ಉದ್ಯೋಗಿಗಳು ದೂರು ನೀಡಿದ ಬೆನ್ನಲ್ಲೇ ನಾಸಿಕ್​ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ನರೇಗಾಂವ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಸುಳಿವು ದೊರೆತ ಪೊಲೀಸರು, ಸ್ಥಳೀಯ ಪೊಲೀಸರ ನೆರವಿನಿಂದ ಈಕೆಯನ್ನು ಬಂಧಿಸಿದ್ದಾರೆ. ಬಳಿಕ ನಾಸಿಕ್​ನ ಜಿಲ್ಲಾ ನ್ಯಾಯಾಲಯದ ವಿಶೇಷ ಕೋಶದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಓರ್ವ ಮಹಿಳಾ ಉದ್ಯೋಗಿ ಸೇರಿ 8 ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಿದಾ ಖಾನ್​, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಈಕೆಯನ್ನು ಬಂಧಿಸಲು ಎಸ್​ಐಟಿ ಶೋಧ ನಡೆಸುತ್ತಿತ್ತು.
ನಿದಾ ಖಾನ್​ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಇಸ್ಲಾಂ ಪದ್ದತಿಯ ಪ್ರಾರ್ಥನೆ ಸಲ್ಲಿಸಲು ಮತ್ತು ದನದ ಮಾಂಸಾಹಾರ ಸೇವಿಸಲು ಒತ್ತಡ ಹೇರುತ್ತಿದ್ದಳು. ಅಷ್ಟೇ ಅಲ್ಲದೇ, ಮಹಿಳಾ ಉದ್ಯೋಗಿಗಳಿಗೆ ಮುಸ್ಲಿಂ ಸಂಪ್ರದಾಯದಂತೆ ಉಡುಗೆ ತೊಡಲು, ಅನುಕರಣೆ ಮಾಡಲು ಒತ್ತಾಯಿಸುತ್ತಿದ್ದಳು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ತನ್ನ​ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಿದಾ ಖಾನ್, ನಾಸಿಕ್​ ಕೋರ್ಟ್​ ಮೊರೆ ಹೋಗಿ, ತಾನು ಗರ್ಭಿಣಿಯಾಗಿದ್ದು ನಿರೀಕ್ಷಣಾ ಜಾಮೀನು ಮತ್ತು ಅರ್ಜಿ ವಿಚಾರಣೆಯವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿದ್ದಳು. ಆದರೆ, ಮೇ 2ರಂದು ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಟಿಸಿಎಸ್ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಕಿರುಕುಳದ ಬಗ್ಗೆ ಕಂಪನಿ ಶೂನ್ಯ ಸಹಿಷ್ಣುತಾ ನೀತಿ ಅಳವಡಿಸಿಕೊಂಡಿದೆ ಎಂಬುದಾಗಿ ಸ್ಪಷ್ಟಪಡಿಸಿ, ಈ ಆರೋಪದಲ್ಲಿ ಭಾಗಿಯಾದ ಉದ್ಯೋಗಿಗಳನ್ನು ಅಮಾನತು ಮಾಡಿದ್ದಾಗಿ ತಿಳಿಸಿತ್ತು.

Leave a Reply

Your email address will not be published. Required fields are marked *

error: Content is protected !!