ಉದಯವಾಹಿನಿ, ಚಿಕ್ಕಬಳ್ಳಾಪುರ: ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನ ಬಳಿ ನಡೆದಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಪುಂಡ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನಟ ನಟಿಯರು ಆಗಮಿಸಿದ್ದರು. ಭದ್ರತೆಗೆ ಪೊಲೀಸರು ಕಾಲೇಜಿನ ಗೇಟ್ ಬಳಿ ತೆರಳಿದ್ದರು. ಈ ವೇಳೆ ಹತ್ತಾರು ಮಂದಿ ವಿದ್ಯಾರ್ಥಿಗಳು ಸೈಲೆನ್ಸರ್ ಅಲ್ಟರ್ ಮಾಡಿಕೊಂಡಿದ್ದ ಬೈಕ್‌ಗಳಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಓಡಾಡಿದ್ದರು. ಬೈಕ್ ಕರ್ಕಶ ಶಬ್ಧ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್ ಆಗಿ ಹೋಗಿ ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದೇ ಒಬ್ಬ ವಿದ್ಯಾರ್ಥಿ ಬೈಕ್ ಜೋರು ಸೌಂಡ್ ಮಾಡಿದ್ದಾನೆ. ಬೇರೆ ವಿದ್ಯಾರ್ಥಿಗಳು ಬೇಡ ಅಂದ್ರೂ ಅವನೊಬ್ಬ ಪೊಲೀಸ್ ಏನು ಮಾಡ್ತಾನೆ ಎಂದು ಮತ್ತೆ ಶಬ್ಧ ಮಾಡಿದ್ದಾನೆ. ಈ ವೇಳೆ ಕೆರಳಿದ ಎಎಸ್‌ಐ ಲಾಠಿ ಬೀಸಿದ್ದು, ರಕ್ತ ಬಂದಿದೆ ಎನ್ನಲಾಗಿದೆ.
