ಉದಯವಾಹಿನಿ, ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದ ಬಗ್ಗೆ ಹರಡಿರುವ ವದಂತಿಗಳೆಲ್ಲಾ ಸುಳ್ಳು, ಯಾವ ರೆಸಾರ್ಟ್‌ಗೂ ಬಂದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.ನೆರೆರಾಜ್ಯ ತಮಿಳುನಾಡಿನ ಕಾಂಗ್ರೆಸ್ ಶಾಸಕರು ಹೈಜಾಕ್ ಭೀತಿಯಿಂದ ಬೆಂಗಳೂರಿನ (Bengaluru) ರೆಸಾರ್ಟ್‌ಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ವದಂತಿಗಳ ಕುರಿತು ಅವರು ಪ್ರತಿಕ್ರಿಯಿಸಿದರು.
ಪುದುಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದರು. ಈಗಲ್ಟನ್ ರೆಸಾರ್ಟ್ ರಿಪೇರಿಗಾಗಿ ಮುಚ್ಚಿದೆ ಎಂದು ಕೇಳಿಬರುತ್ತಿರುವ ಮಾತುಗಳೆಲ್ಲಾ ಸುಳ್ಳು. ಶಾಸಕರು ಹೈದರಾಬಾದ್‌ಗೆ ಹೋಗಿದ್ದಾರೆ ಅಂತ ಟಿವಿಯಲ್ಲಿ ನೋಡಿದೆ ಅಷ್ಟೇ. ಪಾರ್ಟಿ ಹೈಕಮಾಂಡ್ ಈ ಬಗ್ಗೆ ನನ್ನ ಬಳಿ ಏನೂ ಚರ್ಚಿಸಿಲ್ಲ. ಹೈಕಮಾಂಡ್ ಸೂಚನೆಯಂತೆ ನಾನು ಪ್ರಚಾರಕ್ಕೆ ಮತ್ತು ಪ್ರಣಾಳಿಕೆ ಬಿಡುಗಡೆಗೆ ಹೋಗಿದ್ದೆ. ತಮಿಳುನಾಡು ಬಗ್ಗೆ ನನಗೆನೂ ಗೊತ್ತಿಲ್ಲ ಮತ್ತು ಯಾವ ಶಾಸಕರು ಕೂಡ ನನ್ನ ಜೊತೆ ಸಂಪರ್ಕದಲ್ಲಿಲ್ಲ, ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೆ ಜನ್ಮದಿನವಿದ್ದರೆ ಶುಭವಾಗಲಿ. ಅವರು ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ, ಅವರಿಗೆ ಗೌರವ ನೀಡಬೇಕು. ಭಗವಂತ ಅವರಿಗೆ ಒಳ್ಳೆಯ ಆರೋಗ್ಯ ನೀಡಲಿ. ರಾಜಕೀಯವಾಗಿ ನಮ್ಮ ವಿಚಾರಧಾರೆಗಳು ಬೇರೆಯಾಗಿರಬಹುದು, ಆದರೆ ಅವರ ಸೇವೆಗೆ ಗೌರವವಿದೆ ಎಂದರು.
