ಉದಯವಾಹಿನಿ, ಚಾಮರಾಜನಗರ: ಕೆಲ ದಿನಗಳ ಹಿಂದಷ್ಟೇ ನೀರು ಕುಡಿಯಲು ಬಂದು ಗಾಯಗೊಂಡಿದ್ದ ಕಾಡಾನೆ (ಗಂಡಾನೆ) ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂನ ಕಾವೇರಿ ವನ್ಯಧಾಮದಲ್ಲಿ ನಡೆದಿದೆ. ಗೋಪಿನಾಥಂ ಜಲಾಶಯದಲ್ಲಿ ನೀರು ಕುಡಿಯಲು ಬಂದಿದ್ದ ವೇಳೆ ಗಂಡಾನೆಗಾಯಗೊಂಡಿತ್ತು. ಈ ವಿಷಯವನ್ನು ಸ್ಥಳೀಯರು ಅರಣ್ಯ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಕೂಡ ಕಾಳಜಿ ವಹಿಸಿ ಚಿಕಿತ್ಸೆ ಕೊಡಿಸುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಾಡಾನೆ ಸಾವನ್ನಪ್ಪಿದೆ.ಘಟನೆಯಿಂದ ಸ್ಥಳೀಯರು, ವನ್ಯಜೀವಿ ಪ್ರಿಯರಿಗೆ ನೋವುಂಟಾಗಿದೆ.
ಬಿಳಿಗಿರಿರಂಗನಬೆಟ್ಟದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ
ಇನ್ನೂ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಪ್ರದೇಶದ ಕೃಷ್ಣಯ್ಯನ ಕಟ್ಟೆ ಡ್ಯಾಂ ಸಮೀಪ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರ ಗಮನ ಸೆಳೆದಿದೆ. ಡ್ಯಾಂ ಬಳಿ ನೀರು ಕುಡಿಯಲು ಹಾಗೂ ಆಹಾರ ಅರಸಿ ಬಂದಿದ್ದ ಕಾಡಾನೆಗಳು ಗುಂಪು ಗುಂಪಾಗಿ ಸಂಚರಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
