ಉದಯವಾಹಿನಿ, ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ಮತ್ತು ಅಧಿಕಾರ ಹಂಚಿಕೆ ಕಿತ್ತಾಟವನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ.
ಹೆಚ್‌ಎಎಲ್ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ರಾಜ್ಯ ಸರ್ಕಾರದ ನಾಯಕರ ನಡುವಿನ ಶೀತಲ ಸಮರವನ್ನು ಲೇವಡಿ ಮಾಡಿದರು. “ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಯಲ್ಲಿ ಎಷ್ಟು ದಿನ ಇರುತ್ತಾರೋ ಯಾರಿಗೂ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಈ ಕಿತ್ತಾಟದಿಂದಾಗಿ ಜನಸಾಮಾನ್ಯರ ಸಮಸ್ಯೆಗಳು ಮೂಲೆಗುಂಪಾಗಿವೆ” ಎಂದು ಕುಟುಕಿದರು.
ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಗುಂಪುಗಾರಿಕೆ ಮತ್ತು ಆಂತರಿಕ ಜಗಳ ಸಾಮಾನ್ಯವಾಗಿದೆ. ಈ ಹಿಂದೆ ರಾಜಸ್ಥಾನದಲ್ಲಿ ನಡೆದ ಅಧಿಕಾರಕ್ಕಾಗಿನ ಕಚ್ಚಾಟವನ್ನು ನೆನಪಿಸಿದ ಅವರು, ಕರ್ನಾಟಕದಲ್ಲೂ ಈಗ ಅದೇ ಹಾದಿ ಮುಂದುವರಿಯುತ್ತಿದೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಸರ್ಕಾರದ ನಾಯಕರು ಕುರ್ಚಿ ಉಳಿಸಿಕೊಳ್ಳುವ ಮತ್ತು ಇನ್ನೊಬ್ಬರನ್ನು ಕೆಳಗಿಳಿಸುವ ಕದನದಲ್ಲಿ ಮುಳುಗಿದ್ದಾರೆ. ಈ ನಡುವೆ ರಾಜ್ಯದ ಖಜಾನೆ ಲೂಟಿಯಾಗುತ್ತಿದೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ನಡೆಯುತ್ತಿರುವ ‘ಅಧಿಕಾರ ಹಂಚಿಕೆ’ ಮತ್ತು ‘ಅವಧಿ ಪೂರ್ಣ’ ಚರ್ಚೆಗಳನ್ನೇ ಅಸ್ತ್ರವಾಗಿ ಬಳಸಿಕೊಂಡ ಪ್ರಧಾನಿ, “ಮುಂದಿನ ಬಾರಿ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ನಾಯಕರು ಕಾಲ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕಲ್ಯಾಣ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
