ಉದಯವಾಹಿನಿ, ಚಿತ್ರದುರ್ಗ: ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸಚಿವ ಡಿ.ಸುಧಾಕರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಎಂದು ಗುರುತಿಸಿಕೊಂಡಿದ್ದ ಡಿ.ಸುಧಾಕರ್ ಒಟ್ಟು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಹಿರಿಯೂರು ಶಾಸಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ದಿವಂಗತ ಎನ್.ದಶರಥಯ್ಯ ಮಗನಾಗಿ, 1961ರಲ್ಲಿ ಮಾ.28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲೇ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಬಿಕಾಂ ಪದವಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದ್ದರು.
ಪದವಿ ಶಿಕ್ಷಣ ಮುಗಿಸಿದ ಬಳಿಕ ಬ್ಯುಸಿನೆಸ್ ಕಡೆ ಗಮನಹರಿಸಿದ್ದರು. ನಂತರ ಹರ್ಷಿಣಿ ಎಂಬುವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಸುಹಾಸ್ ಎಂಬ ಪುತ್ರ ಹಾಗೂ ಸ್ಪೂರ್ತಿ ಎಂಬ ಹೆಣ್ಣು ಮಗಳಿದ್ದಾರೆ. ಇನ್ನು ಇವರ ಚಿಕ್ಕಪ್ಪರಾದ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದಲ್ಲಿ 1978 ಹಾಗೂ 1989ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿ.ಸುಧಾಕರ್ ರಾಜಕೀಯ ದಾರಿಯನ್ನು ಕಂಡುಕೊಂಡರು.
ಇನ್ನು ಸುಧಾಕರ್ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 47,550 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ ಚಳ್ಳಕೆರೆ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ್ದರಿಂದ 2008ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಧಿಡೀರ್ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 43,078 ಮತಗಳನ್ನು ಪಡೆದು 16,158 ಮತಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದ್ದರು.ಈ ಮೂಲಕ ಅವರು ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಿದರು. ಬದಲಾದ ಸಮಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಮುಂದುವರೆದರು. ಇನ್ನು 2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆಗ ಇವರಿಗೆ ಟಿಕೆಟ್ ತಪ್ಪಿಸಲು ಸಾಕಷ್ಟು ಪ್ರಯತ್ನ ನಡೆದವು. ಆದರೆ ಅದು ಸಾಧ್ಯವಾಗಲಿಲ್ಲ.2013ರಲ್ಲಿ ಡಿ.ಸುಧಾಕರ್ ಅವರಿಗೆ ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿತ್ತು. ಜೆಡಿಎಸ್ ಅಭ್ಯರ್ಥಿ ದಿವಂಗತ ಎ.ಕೃಷ್ಣಪ್ಪ ವಿರುದ್ಧ ಕೂದಲೆಳೆ ಅಂತರದಲ್ಲಿ ಅಂದರೆ 1,205 ಮತಗಳನ್ನು ಪಡೆದು (71661 ಒಟ್ಟು ಮತಗಳು), ಮರು ಆಯ್ಕೆ ಆದರು. ಇದರ ಜೊತೆಗೆ ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸಹ ಆಯ್ಕೆಯಾದರು.
ನಂತರ 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಈ ಚುನಾವಣೆಯಲ್ಲಿ 64,858 ಮತಗಳನ್ನು ಪಡೆದು, ಮತದಾರರ ತೀರ್ಪಿಗೆ ಸುಧಾಕರ್ ತಲೆ ಬಾಗಿಸಿದರು. ಯಾಕಂದರೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸುಮಾರು 12 ಸಾವಿರ ಮತಗಳಿಂದ ಪರಾಭವಗೊಂಡರು.
