ಉದಯವಾಹಿನಿ, ಶಿವಮೊಗ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಇಬ್ಬರಿಗೂ 14 ಲಕ್ಷ ರೂ. ದಂಡ ಹಾಗೂ ದೂರುದಾರರಿಗೆ ಪರಿಹಾರವಾಗಿ 5 ಲಕ್ಷ ರೂ. ನೀಡುವಂತೆ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿದ್ದಾರೆ.
ಭದ್ರಾವತಿಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಸುರಗಿತೋಪಿನ ಗ್ರಾಮದ ಫ್ಲೋರಾ ನ್ಯಾನ್ಸಿಯ ವಿವಾಹ 2014 ರಲ್ಲಿ ಹತ್ತಿರದ ಸಂಬಂಧಿ ಪ್ರಕಾಶ್ ಬಾಬು ಜೊತೆ ಆಗಿತ್ತು. ಟ್ಯಾಕ್ಸಿ ಚಾಲಕನಾಗಿ ಪ್ರಕಾಶ್ ಬಾಬು ಕೆಲಸ ಮಾಡಿಕೊಂಡಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ.

ಮದುವೆಯ ಕೆಲ ವರ್ಷಗಳ ನಂತರ ಫ್ಲೋರಾ ನಾನ್ಸಿಗೆ ರಾಜಶೇಖರಯ್ಯ ಜೊತೆ ಸಂಬಂಧ ಬೆಳೆದಿತ್ತು. ಇದಕ್ಕೆ ಪತಿ ಪ್ರಕಾಶ್ ಬಾಬು ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಇರುಸುಮುರಿಸಿಗೆ ಒಳಗಾಗಿದ್ದ ಪತ್ನಿ 2020ರ ಜ.15 ರಂದು ರಾತ್ರಿ ಇಲ್ಲಿನ ಸುರಗಿ ತೋಪಿನಲ್ಲಿರುವ ಮನೆಯಲ್ಲಿ ಪತಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಮಾತ್ರೆ ಬೆರೆಸಿ ಕುಡಿಸಿದ್ದಳು. ಪತಿ ನಿದ್ರೆಗೆ ಜಾರಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಪತಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಬಳಿಕ ಇಬ್ಬರೂ ಶವವನ್ನು ಕಾರಲ್ಲಿ ತೆಗೆದುಕೊಂಡು ಹೋಗಿ, ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪದ ಭದ್ರಾ ನಾಲೆಗೆ ಎಸೆದು ಬಂದಿದ್ದರು. 3 ದಿನಗಳ ಬಳಿಕ ಶವ ದೊರೆತಿತ್ತು. ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಭಾವಿಸಲಾಗಿತ್ತು. ಮೃತನ ಸಹೋದರ ಫ್ರಾನ್ಸಿಸ್ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ ಪೇಪರ್ ಟೌನ್ ಠಾಣೆ ಪೊಲೀಸರು, ಪ್ರಕರಣ ಭೇದಿಸಿದ್ದರು.

Leave a Reply

Your email address will not be published. Required fields are marked *

error: Content is protected !!