ಉದಯವಾಹಿನಿ, ರಾಯಚೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ್ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಲಿಂಗಸೂಗೂರು ಮುದಗಲ್‌ನಲ್ಲಿ ಭಾನುವಾರ ಮಾತನಾಡಿದ ಅವರು, ಪ್ರಧಾನಿಮಂತ್ರಿಗಳ ಕಣ್ಣಿಗೆ ಏನೇನು ಕಾಣುತ್ತಿದೆಯೋ ನಮಗೆ ಗೊತ್ತಿಲ್ಲ. ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ ಎಂದು ಹೇಳಿದರು.
ಇದೇ ವೇಳೆ ಸಚಿವ ಡಿ.ಸುಧಾಕರ್ ನಿಧನಕ್ಕೆ ಡಿ.ಕೆ. ಶಿವಕುಮಾರ್ ತ್ರೀವ ಸಂತಾಪ ಸೂಚಿಸಿದರು, ನಮ್ಮ ಆತ್ಮೀಯರಾದ ಸುಧಾಕರ್ ಮಂಡಿ ನೋವಿನಿಂದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಬಿಡುಗಡೆಯಾಗಬೇಕಿತ್ತು. ಆದರೆ ಲಂಗ್ ಇನ್ಫೆಕ್ಷನ್‌ನಿಂದ ತೊಂದರೆ ಉಂಟಾಯಿತು. ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುಧಾಕರ್ ಅವರು ನನಗೆ ಬಹಳ ಆತ್ಮೀಯರು. ಸಹಕಾರ ಕ್ಷೇತ್ರದಲ್ಲಿ ಡಿಸಿಸಿ ಅಧ್ಯಕ್ಷರಾಗಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಪ್ಪರ್ ಭದ್ರಾ ಯೋಜನೆ ಯಶಸ್ಸಿಗೆ ಎಲ್ಲ ಶಾಸಕರನ್ನೂ ಒಗ್ಗೂಡಿಸಿ ಕೆಲಸ ಮಾಡಿದ್ದರು. ಯಾವಾಗಲೂ ಬಡವರ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಜೈನ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕತ್ವ ಅವರದ್ದಾಗಿತ್ತು. ಅವರ ನಿಧನದಿಂದ ಪಕ್ಷಕ್ಕೆ, ಸರ್ಕಾರಕ್ಕೆ, ಜಿಲ್ಲೆಗೆ ಹಾಗೂ ನನಗೆ ದೊಡ್ಡ ಆಘಾತವಾಗಿದೆ ಎಂದರು.
ನಾಳೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಮುದಗಲ್‌ನಿಂದ ನೇರವಾಗಿ ಕೆಲವು ಸಚಿವರೊಂದಿಗೆ ಚಿತ್ರದುರ್ಗಕ್ಕೆ ತೆರಳುತ್ತೇವೆ. ಅವರಿಗೆ ಎರಡು ಖಾತೆಗಳನ್ನು ನೀಡಲಾಗಿತ್ತು. ಪಕ್ಷ ಮತ್ತು ಸರ್ಕಾರಕ್ಕಾಗಿ ತ್ಯಾಗ ಮಾಡಿದ್ದರು. ರಾಮಲಿಂಗಾರೆಡ್ಡಿ ಅವರಿಗೆ ಒಂದು ಖಾತೆ ಬಿಟ್ಟುಕೊಟ್ಟಿದ್ದರು. ದೊಡ್ಡ ಹೃದಯವಂತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು.
