ಉದಯವಾಹಿನಿ, ಬೆಂಗಳೂರು: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ 71 ವರ್ಷದ ಅಪರಾಧಿಯೇ ಅನಾರೋಗ್ಯಕ್ಕೆ ತುತ್ತಾಗಿ ಗಾಲಿಕುರ್ಚಿಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಶಿಕ್ಷೆಯನ್ನು ಒಂದು ದಿನದ ಸರಳ ಕಾರಾಗೃಹ ಶಿಕ್ಷೆಗೆ ಇಳಿಕೆ ಮಾಡಿ ಮಹತ್ವದ ಆದೇಶ ಮಾಡಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಮೈಸೂರಿನ ಬನ್ನಿಮಂಟಪ ನಿವಾಸಿ 71 ವರ್ಷದ ಸೈಫುದ್ದೀನ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ, ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರು ಗಾಲಿಕುರ್ಚಿಗೆ ಸೀಮಿತರಾಗಿದ್ದಾರೆ. ಅವರು ದಿನನಿತ್ಯದ ಚಟುವಟಿಕೆಗಳಿಗೆ ಮತ್ತೊಬ್ಬರನ್ನು ಅವಲಂಬಿಸಿದ್ದಾರೆ. ಅವರ ವಿರುದ್ಧ ಆರೋಪಗಳಿದ್ದರೂ ಇಂತಹ ಅನಾರೋಗ್ಯ ಸ್ಥಿತಿಯಲ್ಲಿ ಜೈಲಿಗೆ ಕಳುಹಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದೆ.

ಅಲ್ಲದೇ, ಆರೋಪಿ ಮಾಡಿದ ಕೃತ್ಯದಿಂದ ಸಾವಿಗೀಡಾಗಿದ್ದ ಸಂತ್ರಸ್ತರ ಕುಟುಂಬಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರು.ಗಳನ್ನು 2026ರ ಮೇ 15ರೊಳಗೆ ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೇ, ಬ್ಲಡ್ ಮನಿ ಸಿದ್ದಾಂತ ಎಂಬ ಪರಿಕಲ್ಪನೆ ಭಾರತೀಯ ಕ್ರಿಮಿನಲ್ ನ್ಯಾಯಶಾಸ್ತ್ರಕ್ಕೆ ಅನ್ಯವಾದದ್ದು. ಆದರೂ ಅರ್ಜಿದಾರರ ಆರೋಗ್ಯ ಹಾಗೂ ದೈಹಿಕ ಪರಿಸ್ಥಿತಿ ಗಮನಿಸಿ, ಇದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಿಕ್ಷೆಯನ್ನು ತಿದ್ದುಪಡಿ ಮಾಡುವುದು ಸಮಂಜಸ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2012ರ ಜುಲೈ 28ರಂದು ಕೆಆರ್‌ಎಸ್ ರಿಂಗ್ ರಸ್ತೆಯಲ್ಲಿ ಅಪರಾಧಿ ಟೆಸ್ಟ್ ಡ್ರೈವ್ ಮಾಡುತ್ತಿದ್ದ ಕಾರು ದ್ವಿಚಕ್ರವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಿ ಎಂಬುವರು ಮೃತಪಟ್ಟು, ಅವರ ಸಹೋದರ ಸಹೋದರ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣಾ ನಡೆಸಿದ್ದ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ, ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅಜಾಗರೂಕ ಚಾಲನೆ), 304ಎ (ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದು) ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿ ದೋಷಿ ಎಂದು ಪ್ರಕಟಿಸಿತ್ತು, ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಆ ತೀರ್ಪನ್ನು ದೃಢಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸೈಫುದ್ದೀನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published. Required fields are marked *

error: Content is protected !!