ಉದಯವಾಹಿನಿ, ಚಿಕ್ಕಮಗಳೂರು : ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದಲ್ಲಿ ಮೂರು ಮನೆಗಳಲ್ಲಿ ಏಕ ಕಾಲದಲ್ಲಿ ಕಂಡುಬಂದ ಮೂರು ಭಾರಿ ಗಾತ್ರದ ನಾಗರಹಾವುಗಳನ್ನು ಉರಗ ತಜ್ಞ ಆಲ್ಬರ್ಟ್ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದ ಮೂರು ಮನೆಗಳ ಕೋಳಿ ಗೂಡಿನಲ್ಲಿ ಅವಿತಿದ್ದ ಮೂರು ನಾಗರಹಾವುಗಳನ್ನು ರಕ್ಷಿಸಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.ಬಿದರೆ ಗ್ರಾಮದ ದೇವರಾಜ್, ಬಿ. ಬಿ. ರಾಮೇಗೌಡ ಹಾಗೂ ನಾಗರತ್ನ ಎಂಬುವರ ಮನೆಯ ಕೋಳಿ ಗೂಡಿನಲ್ಲಿ ಬೇಸಿಗೆಯಿಂದಾಗಿ ಪ್ರತ್ಯೇಕವಾಗಿ ಮೂರು ನಾಗರಹಾವುಗಳು ಅಡಗಿ ಮಲಗಿದ್ದವು. ಈ ಹಾವುಗಳು ಮನೆಯವರಿಗೆ ಆತಂಕ ಉಂಟು ಮಾಡಿದ್ದವು.
ಕೋಳಿಗೂಡಿಗೆ ಬಂದು ಹೋಗುತ್ತಿದ್ದ ನಾಗರಹಾವು 21 ಹಾವಿನ ಮೊಟ್ಟೆಗಳನ್ನು ಇಟ್ಟು ದೇವರಾಜ್ ಅವರ ಮನೆಯ ಪಕ್ಕದ ಗುಂಡಿಯಲ್ಲಿ ಅದಕ್ಕೆ ಕಾವು ಕೊಡುತ್ತಿತ್ತು. ಎರಡನೇ ನಾಗರಹಾವು ಬರೋಬ್ಬರಿ ಒಂಬತ್ತು ಕೋಳಿ ಮೊಟ್ಟೆಗಳನ್ನು ನುಂಗಿ ಬೆಚ್ಚಗೆ ಕೋಳಿ ಗೂಡಿನಲ್ಲಿ ಮಲಗಿತ್ತು. ಮೂರನೇ ನಾಗರಹಾವು 8 ಕೋಳಿ ಮೊಟ್ಟೆಗಳನ್ನು ನುಂಗಿ ಅದು ಕೂಡ ಮನೆಯ ಕೋಳಿ ಗೂಡಿನಲ್ಲಿ ಬೆಚ್ಚಗೆ ಮಲಗಿತ್ತು.
ಈ ಎರಡು ಹಾವುಗಳು ಅಧಿಕ ಮೊಟ್ಟೆಗಳನ್ನು ನುಂಗಿ ಹಿಂದೆಯೂ ಹೋಗಲು ಆಗದೆ, ಮುಂದೆ ಹೋಗಲು ಆಗದೇ ಸ್ಥಳದಲ್ಲಿಯೇ ಸುತ್ತು ಹಾಕಿಕೊಂಡು ಮಲಗಿದ್ದವು. ಈ ಘಟನೆಯನ್ನು ನೋಡಿ ಮನೆಯ ಸದಸ್ಯರು ಬೆಚ್ಚಿಬಿದ್ದಿದ್ದರು. ನಂತರ ಅವರು ಕೂಡಲೇ ಉರಗ ತಜ್ಞ ಆಲ್ಬರ್ಟ್​ಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!