ಉದಯವಾಹಿನಿ, ಸಿಕಂದರಾಬಾದ್(ತೆಲಂಗಾಣ): ಪ್ರಧಾನಿ  ಮೋದಿ ಅವರು ಹೈದರಾಬಾದ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಮೋದಿ ಅವರ ಸಭೆ ಮುಗಿಯುವವರೆಗೆ ಸಿಕಂದರಾಬಾದ್ ಪೆರೇಡ್​ ಮೈದಾನದಲ್ಲಿ ಸಂಚಾರ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ವ್ಯವಸ್ಥೆಗಳೂ ಪೂರ್ಣಗೊಂಡಿವೆ. ಪ್ರಧಾನಿ ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಅವರು ಹಿಂತಿರುಗುವವರೆಗೆ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಗೆ ಸುಮಾರು ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕರ್ತವ್ಯಗಳಲ್ಲಿ ಭಾಗವಹಿಸಲು ಈಗಾಗಲೇ ತಯರಾಗಿದ್ದಾರೆ.

ನಗರದ ಪ್ರಮುಖ ಛೇದಕಗಳೂ ಸೇರಿದಂತೆ ಪೆರೇಡ್ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಕಣ್ಗಾವಲು ನಿರ್ವಹಿಸಲಾಗುತ್ತಿದೆ. ಆಯಾ ಸಿಸಿಟಿವಿ ಕ್ಯಾಮೆರಾಗಳನ್ನು ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವವರನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಮೈದಾನಕ್ಕೆ ಬಿಡುತ್ತಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ನಾವು 2,620 ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರಧಾನಿಯವರ ಸಭೆ ನಡೆಯುವ ಪರೇಡ್ ಮೈದಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಕಣ್ಗಾವಲು ಇರುತ್ತದೆ. ಕಮಾಂಡ್ ಕಂಟ್ರೋಲ್ ಸಿಸ್ಟಮ್ ಮೂಲಕ 24 ಗಂಟೆಗಳ ಕಣ್ಗಾವಲು ಸ್ಥಾಪಿಸಿದ್ದೇವೆ. ಮಧ್ಯರಾತ್ರಿ 12 ಗಂಟೆಯಿಂದ ಪರೇಡ್ ಮೈದಾನದ ಸುತ್ತಮುತ್ತಲಿನ ಪ್ರದೇಶಗಳನ್ನು ಹಾರಾಟ ನಿಷೇಧ ವಲಯ ಮಾಡಲಾಗಿದೆ. ಜನರು ಸಭೆಗೆ ಅನಧಿಕೃತ ವಸ್ತುಗಳನ್ನು ತರಬಾರದು” ಎಂದು ಮಲ್ಕಾಜ್‌ಗಿರಿ ಸಿಪಿ ಸುಮತಿ ತಿಳಿಸಿದ್ದಾರೆ.

ಪೆರೇಡ್​ ಮೈದಾನ, ಪ್ಯಾರಡೈಸ್​, ಪಟ್ನಿ ಮತ್ತು ಇತರ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ವಾಹನ ಪಾರ್ಕಿಂಗ್‌ಗಾಗಿ 12 ಪ್ರದೇಶಗಳನ್ನು ನಿಗದಿಪಡಿಸಲಾಗಿದೆ. ಆರ್‌ಟಿಸಿ, ಖಾಸಗಿ ಬಸ್‌ಗಳು ಮತ್ತು ಭಾರೀ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ. ರಸ್ತೆಗಳ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಡ್ರೋನ್‌ಗಳು, ಕ್ಯಾಮೆರಾಗಳು, ಎಲೆಕ್ಟ್ರಾನಿಕ್ ಸಾಧನಗಳು, ಬ್ಯಾಗ್‌ಗಳು, ಬ್ಯಾನರ್‌ಗಳು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ವಿಧಾನಸಭಾ ಸಭಾಂಗಣದೊಳಗೆ ಅನುಮತಿಸಲಾಗುವುದಿಲ್ಲ ಎಂದು ಮಲ್ಕಾಜ್‌ಗಿರಿ ಸಿಪಿ ಸ್ಪಷ್ಟಪಡಿಸಿದ್ದಾರೆ. ಎಸ್‌ಪಿಜಿ ತಂಡಗಳು ಮೂರು ದಿನಗಳ ಮುಂಚಿತವಾಗಿ ವಿಧಾನಸಭಾ ಸಭಾಂಗಣವನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ ಮತ್ತು ತೀವ್ರ ತಪಾಸಣೆ ನಡೆಸುತ್ತಿವೆ.

Leave a Reply

Your email address will not be published. Required fields are marked *

error: Content is protected !!