ಉದಯವಾಹಿನಿ, ನವದೆಹಲಿ: ಏಕಕಾಲದಲ್ಲಿ ವಿವಿಧ ಗುರಿಗಳ ಮೇಲೆ ದಾಳಿ ಮಾಡಲು ಬಹು ಪೇಲೋಡ್‌(ಸಿಡಿತಲೆ)ಗಳನ್ನು ನಿಯೋಜಿಸುವ ಸಾಮರ್ಥ್ಯದ ಸುಧಾರಿತ ‘ಅಗ್ನಿ’ ಕ್ಷಿಪಣಿಯನ್ನು ಭಾರತ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಈ ಸಾಧನೆಯಿಂದ ಭಾರತ ಜಗತ್ತಿನ ಆಯ್ದ ರಾಷ್ಟ್ರಗಳ ಗುಂಪು ಸೇರಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (MIRV) ತಂತ್ರಜ್ಞಾನ ಹೊಂದಿರುವ ಈ ಕ್ಷಿಪಣಿ ಪರೀಕ್ಷೆ ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆದಿದೆ.

MIRV ತಂತ್ರಜ್ಞಾನ: ಈ ತಂತ್ರಜ್ಞಾನದಲ್ಲಿ ಒಂದೇ ಕ್ಷಿಪಣಿಯ ಮೂಲಕ ವಿವಿಧ ಸ್ಥಳಗಳಲ್ಲಿರುವ ಅನೇಕ ಗುರಿಗಳ ಮೇಲೆ ಏಕಕಾಲದಲ್ಲಿ ಹಲವು ಸಿಡಿತಲೆಗಳನ್ನು ಪ್ರಯೋಗಿಸಲು ಸಾಧ್ಯವಾಗುತ್ತದೆ.ರಕ್ಷಣಾ ಸಚಿವಾಲಯ ಇದನ್ನು ಸುಧಾರಿತ ಅಗ್ನಿ ಕ್ಷಿಪಣಿಯ ಪರೀಕ್ಷೆ ಎಂದು ಕರೆದಿದೆ. ಅಧಿಕೃತ ಮೂಲಗಳ ಪ್ರಕಾರ, ಇದು ‘ಮಿಷನ್ ದಿವ್ಯಾಸ್ತ್ರ’ ಯೋಜನೆ ಅಡಿಯಲ್ಲಿ ನಡೆಸಲಾದ ಅಗ್ನಿ-5 ಕ್ಷಿಪಣಿಯ ಪರೀಕ್ಷೆಯಾಗಿದೆ.ಈ ಕ್ಷಿಪಣಿಯು ಹಿಂದೂ ಮಹಾಸಾಗರ ಪ್ರದೇಶದ ವಿಶಾಲ ಭೌಗೋಳಿಕ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿವಿಧ ಗುರಿಗಳನ್ನು ಯಶಸ್ವಿಯಾಗಿ ತಲುಪಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಶಸ್ವಿ ಪರೀಕ್ಷೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತೀಯ ಸೇನೆ ಮತ್ತು ಸಂಬಂಧಿತ ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ. ಕ್ಷಿಪಣಿ ಉಡಾವಣೆಯಿಂದ ಹಿಡಿದು ಸಿಡಿತಲೆಗಳು ಗುರಿ ತಲುಪುವವರೆಗಿನ ಸಂಪೂರ್ಣ ಪಥವನ್ನು ವಿವಿಧ ಭೂ ಆಧಾರಿತ ಮತ್ತು ಹಡಗು ಆಧಾರಿತ ಕೇಂದ್ರಗಳ ಮೂಲಕ ಟ್ರ್ಯಾಕಿಂಗ್ ಮಾಡಲಾಗಿದ್ದು, ಯೋಜನೆಯ ಎಲ್ಲಾ ಉದ್ದೇಶಗಳು ಯಶಸ್ವಿಯಾಗಿ ಪೂರೈಸಲ್ಪಟ್ಟಿವೆ ಎಂದು ಸಚಿವಾಲಯ ದೃಢಪಡಿಸಿದೆ.

 

Leave a Reply

Your email address will not be published. Required fields are marked *

error: Content is protected !!