ಉದಯವಾಹಿನಿ, ಇಂಫಾಲ: ಮಣಿಪುರದ ಕಾಮ್ಯಾಂಗ್ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಸಮೀಪದ ನಮ್ಲ ಗ್ರಾಮದಿಂದ ಕುಕಿ ನ್ಯಾಷನಲ್ ಆರ್ಮಿ (ಬರ್ಮಾ) ಹಾಗೂ ಗ್ರಾಮ ಸ್ವಯಂಸೇವಕರ ಪೂರ್ವ ವಲಯದ ಬಂಡುಕೋರರು ಅಪಹರಿಸಿದ್ದ ತಂಷ್ಣುಕ್ ನಾಗಾ ಸಮುದಾಯದ ಮಹಿಳೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಒಲಿನಾ ನಿಂಗೇನ್ (45) ಎಂಬ ಮಹಿಳೆಯನ್ನು ಅಸ್ಸಾಂ ರೈಫಲ್ಸ್ ಹಾಗೂ ಜಿಲ್ಲಾಡಳಿತದ ಜಂಟಿ ಪ್ರಯತ್ನದ ಫಲವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಮಹಿಳೆಯನ್ನು ಅಪಹರಿಸಿದ ಬಳಿಕ ಅಸ್ಸಾಂ ರೈಫಲ್ಸ್ ಗುಪ್ತಚರ ಸಂಸ್ಥೆಗಳು ಹಾಗೂ ಇತರೆ ಭದ್ರತಾ ಏಜೆನ್ಸಿಗಳು ವ್ಯಾಪಕ ನಿಗಾ ಮತ್ತು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಈ ನಡುವೆ, ಮಹಿಳೆಯನ್ನು ಅಪಹರಿಸಲಾಗಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಝಡ್ ಚೋರೊ ಗ್ರಾಮದ ದಕ್ಷಿಣ ಭಾಗದ ಬಳಿ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಮಹಿಳೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದ ಬಳಿಕ, ಗ್ರಾಮದ ಮುಖ್ಯಸ್ಥರಾಗಿರುವ ಮಹಿಳೆಯ ಪತಿ ಹಾಗೂ ನಾಗರಿಕ ಸಂಘಟನೆಗಳ ಮುಖಂಡರನ್ನು ಹಸ್ತಾಂತರ ಸ್ಥಳದ ಸಮೀಪಕ್ಕೆ ಕರೆತರಲಾಯಿತು. ಬಳಿಕ ಮಹಿಳೆಯನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ಆಕೆಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಮನೋವೈದ್ಯಕೀಯ ನೆರವು ಸಹ ಒದಗಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!