
ಉದಯವಾಹಿನಿ, ಬೆಂಗಳೂರು: ‘ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ’ ಎಂಬಂತೆ ಕಿಡಿಗೇಡಿಗಳ ಚೆಲ್ಲಾಟಕ್ಕೆ ಪೊಲೀಸರು ಪರದಾಡುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಹುಸಿ ಬಾಂಬ್ ಕರೆ ಅಥವಾ ಸಂದೇಶ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆಬೇನೆಯಾಗಿದೆ. ಕಳೆದ ಆರು ವರ್ಷಗಳಲ್ಲಿ ಹುಸಿ ಬಾಂಬ್ ಕರೆಗೆ ಸಂಬಂಧಪಟ್ಟಂತೆ ಒಟ್ಟು 468 ಪ್ರಕರಣಗಳು ದಾಖಲಾಗಿವೆ.
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಧ್ಯಾನಮಂದಿರ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನ ಬಾಂಬ್ ಸ್ಫೋಟಿಸುವುದಾಗಿ ಪೊಲೀಸ್ ನಿಯಂತ್ರಣ ಕಚೇರಿಗೆ ಬಂದ ಕರೆ ಹಿನ್ನೆಲೆಯಲ್ಲಿ ಆರೋಪಿ ಲೋಹಿತ್ ಎಂಬಾತನನ್ನು ಪತ್ತೆ ಹಚ್ಚಿ ಕೋರಮಂಗಲ ಪೊಲೀಸರು ಬಂಧಿಸಿದ್ದರು.
ವೈಯಕ್ತಿಕ ಸಮಸ್ಯೆ, ಖಿನ್ನತೆ, ವ್ಯವಸ್ಥೆ ವಿರುದ್ಧ ಅಸಮಾಧಾನ ಹಾಗೂ ಕ್ಷುಲ್ಲಕ ಕಾರಣಗಳಿಗಾಗಿ ಹುಸಿ ಬಾಂಬ್ ಕರೆ ಅಥವಾ ಸಂದೇಶಗಳನ್ನು ಕಳುಹಿಸಿ ದುಷ್ಕರ್ಮಿಗಳು ಕಿಡಿಗೇಡಿತನ ಪ್ರದರ್ಶಿಸುತ್ತಿದ್ಧಾರೆ. ಪ್ರಧಾನಿಯಿಂದ ಹಿಡಿದು ಸ್ಥಳೀಯ ನಾಯಕರ ಹಮ್ಮಿಕೊಳ್ಳುವ ಸಭೆ-ಸಮಾರಂಭಗಳಿಗೂ ಹುಸಿ ಬಾಂಬ್ ಕರೆ ಬರುತ್ತಿದೆ. ಶಾಲಾ-ಕಾಲೇಜು, ಧಾರ್ಮಿಕ ಕ್ಷೇತ್ರ, ನ್ಯಾಯಾಲಯ, ವಿಮಾನ-ರೈಲು ನಿಲ್ದಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ನಕಲಿ ಸಂದೇಶ ಹರಿಬಿಡಲಾಗುತ್ತಿದ್ದಾರೆ. 2020ರಿಂದ ಈವರೆಗೂ 468 ಹುಸಿ ಬಾಂಬ್ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿಯೇ 318 ಪ್ರಕರಣ ದಾಖಲಾಗಿವೆ ಎಂದು ಗೃಹ ಇಲಾಖೆ ತಿಳಿಸಿದೆ.
ಸ್ವೀಕೃತಗೊಂಡ ಬಾಂಬ್ ಬೆದರಿಕೆ ಕರೆ ಅಥವಾ ಇಮೇಲ್ ಸಂದೇಶ ಬಂದರೆ ಬಾಂಬ್ ಪತ್ತೆ ನಿಷ್ಕ್ರಿಯ ಹಾಗೂ ಶ್ವಾನ ದಳಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿವೆ. ಅಲ್ಲದೆ, ಈವರೆಗೂ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ದೊರೆತ್ತಿಲ್ಲ. ಸಂಕುಚಿತ ಮನಸ್ಥಿತಿಯ ಕಿಡಿಗೇಡಿಗಳು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
