ಉದಯವಾಹಿನಿ, ಬೆಂಗಳೂರು: ನೀಟ್‌ ಅನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದುಗೊಳಿಸುವ ಮೂಲಕ ವೈದ್ಯರಾಗಬೇಕೆಂಬ ಕನಸು ಹೊತ್ತ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ಟೀಕಿಸಿದರು.
ಮೇ 3ರಂದು ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಿದ ಕೇಂದ್ರದ ನಿರ್ಧಾರದ ಕುರಿತು ಮಾತನಾಡಿದ ಅವರು, ನೀಟ್‌ ಎನ್ನುವುದು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣ. ಕಳೆದ ನಾಲ್ಕೈದು ವರ್ಷಗಳಿಂದ ನೀಟ್‌ನಲ್ಲಿ ಒಂದಲ್ಲೊಂದು ಗೊಂದಲಗಳು, ಅಕ್ರಮಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ ಎಂದರು.
ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತೊಮ್ಮೆ ಬಹುದೊಡ್ಡ ಅಚಾತುರ್ಯವಾಗಿದೆ. ಕೇಂದ್ರ ಸರ್ಕಾರವೇ ಇದರ ಸಂಪೂರ್ಣ ಹೊಣೆ ಹೊರಬೇಕು. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು. ಇದು ಕೇಂದ್ರ ಸರ್ಕಾರ ಅಸಮರ್ಥತತೆಗೆ ಸಾಕ್ಷಿ. ಇದರಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈಗ ಮತ್ತೊಮ್ಮೆ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ವಿದ್ಯಾರ್ಥಿಗಳು, ಕುಟುಂಬದವರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಪ್ರತೀ ವರ್ಷ ಆಗುತ್ತಿರುವ ಪ್ರಮಾದವನ್ನು ಸರಿ ಮಾಡಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ ಎಂದರೆ ಇದು ನಿಜಕ್ಕೂ ಅಸಮರ್ಥ ಸರ್ಕಾರ. ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದರೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದೇ ಅರ್ಥ ಎಂದರು.

ಪ್ರಧಾನಿ ದೊಡ್ಡ ದೊಡ್ಡ ಭಾಷಣ ಮಾಡುವುದಲ್ಲ, ಪರಿಹಾರ ಕೊಡಿಸಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ದೊಡ್ಡ ಭಾಷಣ ಮಾಡುವುದಲ್ಲ. ಇಂಥ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಬೇಕು. “ಪರೀಕ್ಷಾ ಪೇ ಚರ್ಚಾ” ಮಾಡುವವರು ಈ ಪರೀಕ್ಷೆಯಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಲಿ. ಕರ್ನಾಟಕದಲ್ಲಿ ನಾವು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದಾಗ ಇಂಥ ಯಾವುದೇ ಪ್ರಮಾದ ನಡೆದಿಲ್ಲ. ನಮ್ಮ ಪರೀಕ್ಷಾ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್‌ ಹೇಳಿದರು.
ಕೇಂದ್ರ ಸರ್ಕಾರಕ್ಕೆ, ಪ್ರಧಾನಿಗೆ ಪರೀಕ್ಷೆ ನಡೆಸುವ ಗಂಧ ಗಾಳಿ ಗೊತ್ತಿಲ್ಲ. ಅದಕ್ಕಾಗಿ ಪ್ರತೀ ವರ್ಷ ತಪ್ಪುಗಳ ಮೇಲೆ ತಪ್ಪು ಎಸಗುತ್ತಲೇ ಇದೆ. ಇಂಥವರಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ. ವಿದ್ಯಾರ್ಥಿಗಳು ನೀಟ್​ಗಾಗಿ ಸಾಕಷ್ಟು ಪರಿಶ್ರಮಪಟ್ಟು ಮಾನಸಿಕ ಒತ್ತಡದಿಂದ ಮುಕ್ತರಾಗಿದ್ದರು. ಈಗ ಪರೀಕ್ಷೆ ರದ್ದು ಮಾಡಿದ್ದರಿಂದ ಅವರ ಮೇಲೆ ಒತ್ತಡ ಹೇರಿದಂತಾಗಿದೆ. ಆದರೆ, ವಿದ್ಯಾರ್ಥಿಗಳು ಕಷ್ಟಕಾಲದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೇ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ. ಇದೇ ನನ್ನ ಆತ್ಮೀಯ ಸಲಹೆ ಎಂದು ತಿಳಿಸಿದ್ದಾರೆ. ಕೋಚಿಂಗ್‌ ಸೆಂಟರ್‌ಗಳ ದಂಧೆ: ರಾಜಸ್ಥಾನ, ಹರಿಯಾಣದಲ್ಲಿರುವ ಕೋಚಿಂಗ್‌ ಸೆಂಟರ್‌ಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿಸಿ, ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದವರೂ ಕೂಡ ಇದರಲ್ಲಿ ಪಾಲುದಾರರು. ಸಂಬಂಧಪಟ್ಟ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಅಕ್ರಮದಲ್ಲಿ ತೊಡಗುವ ಇಂಥ ಕೋಚಿಂಗ್‌ ಸೆಂಟರ್‌ಗಳ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!